ಕೊಲ್ಲಂ(ಕೇರಳ): ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಭಾನುವಾರ ದೇಶಾದ್ಯಂತ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣೆಯ ಹೆಸರಿನಲ್ಲಿ ನಾಚಿಕೆಗೇಡಿನ ಘಟನೆ ನಡೆದಿದೆ. ಈ ಸಂಬಂಧ ಇದೀಗ ಕೊಲ್ಲಂ ಪೊಲೀಸರು ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ಜಿಲ್ಲೆಯ ಆಯೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನೀಟ್ ಪರೀಕ್ಷೆಗೆ ಹಾಜರಾಗುವಾಗ ತಾನು ಎದುರಿಸಿದ ಅವಮಾನಕರ ಸನ್ನಿವೇಶವನ್ನು ಬಾಲಕಿ ಠಾಣೆಯಲ್ಲಿ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾಳೆ. ಆ ದೂರು ಆಧರಿಸಿ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 354 (ಮಹಿಳೆಯರ ಮೇಲೆ ಉದ್ದೇಶಪೂರ್ವಕ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು 509 (ಮಾನಹಾನಿ) ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದೂ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: NEET ಪರೀಕ್ಷೆ ವೇಳೆ ಕೆಲವೆಡೆ ಹಿಜಾಬ್ ವಿವಾದ: ಕೇರಳದಲ್ಲಿ ವಿದ್ಯಾರ್ಥಿನಿಯರ ಒಳ ಉಡುಪು ತೆಗೆಸಿದ ಗಂಭೀರ ಆರೋಪ
"ನೀಟ್(NEET) ಬುಲೆಟಿನ್ ಪ್ರಕಾರವೇ ಮಗಳು ಬಟ್ಟೆ ಧರಿಸಿದ್ದಳು. ಒಳ ಉಡುಪುಗಳ ಬಗ್ಗೆ ಅಲ್ಲಿ ಏನನ್ನೂ ಹೇಳಿರಲಿಲ್ಲ. ಈ ಸಂದರ್ಭದಲ್ಲಿ ನಡೆದ ಕೆಟ್ಟ ಅನುಭವದಿಂದ ಆಕೆ ಇನ್ನೂ ಹೊರಬಂದಿಲ್ಲ" ಎಂದು 17 ವರ್ಷದ ಬಾಲಕಿಯ ತಂದೆ ಮಾಧ್ಯಮಗಳಿಗೆ ಸೋಮವಾರ ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿರುವ ವಿವಿಧ ಸಂಘಟನೆಗಳು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿವೆ. ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವೂ ತನಿಖೆಗೆ ಆದೇಶಿಸಿದೆ. 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಕೊಲ್ಲಂ ಗ್ರಾಮಾಂತರ ಎಸ್ಪಿಗೆ ಸೂಚಿಸಿದೆ.