ಆಲಪ್ಪುಳ (ಕೇರಳ): ಕೇರಳದ ಮೀನುಗಾರಿಕೆ ಮತ್ತು ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ಅವರು ಭಾರತೀಯ ಸಂವಿಧಾನದ ವಿರುದ್ಧ ವ್ಯತಿರಿಕ್ತ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಅಲಪ್ಪುಳದ ಮಲ್ಲಪಲ್ಲಿಯಲ್ಲಿ ನಡೆದ ಸಿಪಿಎಂ ಸಮಾರಂಭದಲ್ಲಿ ಮಾತನಾಡಿದ ಸಚಿವ ಸಾಜಿ ಚೆರಿಯನ್, ಭಾರತೀಯ ಸಂವಿಧಾನವು ಸಾರ್ವಜನಿಕರನ್ನು ಲೂಟಿ ಮಾಡಲು ಸಹಾಯ ಮಾಡುತ್ತಿದೆ ಭಾರತೀಯ ಸಂವಿಧಾನದಲ್ಲಿ ಜಾತ್ಯತೀತತೆ, ಪ್ರಜಾಪ್ರಭುತ್ವದ ಬಗ್ಗೆ ಸಡಿಲವಾಗಿ ವಿವರಿಸಲಾಗಿದೆ. ಭಾರತೀಯ ಸಂವಿಧಾನವು ಕಾರ್ಮಿಕರ ಶೋಷಣೆಗೆ ಸಹಾಯ ಮಾಡಿದೆ ಮತ್ತು ದೇಶದಲ್ಲಿ ಕಾರ್ಮಿಕರಿಗೆ ಯಾವುದೇ ರಕ್ಷಣೆ ನೀಡುತ್ತಿಲ್ಲ ಎಂದು ಗಂಭೀರ ಮಾತುಗಳನ್ನಾಡಿದ್ದಾರೆ.
ಬ್ರಿಟಿಷರು ಸಿದ್ಧಪಡಿಸಿದ ಸಂವಿಧಾನವನ್ನು ಭಾರತೀಯರು ಬರೆದಿದ್ದಾರೆ ಮತ್ತು ಅದನ್ನು ಕಳೆದ 75 ವರ್ಷಗಳಿಂದ ಈ ದೇಶದಲ್ಲಿ ಜಾರಿಗೊಳಿಸಲಾಗಿದೆ. ಕಾರ್ಮಿಕರ ಹೋರಾಟಕ್ಕೂ ಮನ್ನಣೆ ನೀಡದ ದೇಶ ಭಾರತವಾಗಿದ್ದು, ಅದಕ್ಕೆ ಸಂವಿಧಾನವೇ ಕಾರಣ. ಕಾರ್ಮಿಕರ ಶೋಷಣೆಗೆ ಒಪ್ಪುವ ಸಂವಿಧಾನ ಅಂಬಾನಿ, ಅದಾನಿಗಳ ಅಸಾಧಾರಣ ಬೆಳವಣಿಗೆಗೆ ಕಾರಣವಾಗಿದೆ. ಅಂತಹ ಉದ್ಯಮಿಗಳಿಗೆ ಸಂವಿಧಾನ ರಕ್ಷಣೆ ನೀಡಿದೆ. ಅವರ ವಿರುದ್ಧ ಎಷ್ಟು ಮಂದಿ ಪ್ರತಿಭಟನೆ ಮಾಡಬಹುದು? ಎಂದು ಸಜಿ ಚೆರಿಯನ್ ಪ್ರಶ್ನಿಸಿದ್ದಾರೆ.
ನ್ಯಾಯಾಲಯಗಳು ಮತ್ತು ಸಂಸತ್ತಿನ ಬಗ್ಗೆಯೂ ಟೀಕೆ ಮಾಡಿದ ಅವರು, ನ್ಯಾಯಾಲಯ ಮತ್ತು ಸಂಸತ್ತು ಎರಡೂ ಉಳ್ಳವರಿಗೆ ಬೆಂಬಲವಾಗಿವೆ. ಇಂತಹ ಶ್ರೀಮಂತ ಉದ್ಯಮಿಗಳಿಗೆ ಬೆಂಬಲ ನೀಡುವ ಮೋದಿ ಸರ್ಕಾರದ ನಿರ್ಧಾರಗಳು ಮತ್ತು ಕ್ರಮಗಳು ಸಂವಿಧಾನವು ಅವರೊಂದಿಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕಾರ್ಮಿಕರು ಯೋಗ್ಯವಾದ ವೇತನವನ್ನು ಕೇಳುವಂತಿಲ್ಲ, ಅವರು ನ್ಯಾಯಾಲಯವನ್ನು ಸಂಪರ್ಕಿಸಿದರೂ, ಆದೇಶ ಹಾಗೂ ತೀರ್ಪು ಶ್ರೀಮಂತರ ಪರವಾಗಿರುತ್ತವೆ ಎಂದಿದ್ದಾರೆ.
ಇದನ್ನೂ ಓದಿ: ಉಮೇಶ್ ಕೋಲ್ಹೆ ಹತ್ಯೆ ಪ್ರಕರಣ: ಆರೋಪಿಗಳನ್ನು ಜುಲೈ 8 ಕ್ಕೆ ಕೋರ್ಟ್ಗೆ ಹಾಜರುಪಡಿಸಲು NIA ಸಿದ್ಧತೆ