ಕೊಚ್ಚಿ, ಕೇರಳ: ನಾಗರಿಕ ಸಮಾಜವನ್ನೇ ಬೆಚ್ಚಿ ಬೀಳಿಸಿರುವ ಕೇರಳ ನರಬಲಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಹಣದ ಆಸೆಗಾಗಿ ಇಬ್ಬರು ಮಹಿಳೆಯರನ್ನು ಕತ್ತು ಸೀಳಿ ಕೊಂದಿದ್ದಲ್ಲದೇ, ಆರೋಪಿಗಳು ಅವರ ದೇಹವನ್ನು ಬೇಯಿಸಿ ತಿಂದ ಅಸಹ್ಯಕರ ಮಾಹಿತಿ ಹೊರಬಿದ್ದಿದೆ.
ನರಬಲಿ ಪ್ರಕರಣದ ಆರೋಪಿಗಳು ಹತ್ಯೆ ಮಾಡಿ ಬಳಿಕ ಮಂತ್ರವಾದಿ ಹೇಳಿದ ಎಂದು ಮೃತದೇಹದ ಭಾಗಗಳನ್ನು ಬೇಯಿಸಿಕೊಂಡು ತಿಂದಿದ್ದಾರೆ. ವಿಚಾರಣೆಯ ವೇಳೆ ಇದನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ದಂಪತಿಗಳು ವಾಸವಿದ್ದ ತಿರುವಲ್ಲಾದಲ್ಲಿರುವ ಮನೆಗೆ ಸಾಕ್ಷ್ಯ ಸಂಗ್ರಹಕ್ಕೆ ಕರೆದುಕೊಂಡು ಹೋದಾಗ ಪೊಲೀಸರಿಗೆ ಈ ವಿಷಯ ತಿಳಿಸಿದ್ದಾರೆ. ಮೊಹಮ್ಮದ್ ಶಫಿ ಎಂಬಾತ ಮಾಂತ್ರಿಕ ರಶೀದ್ ಎಂದು ನಂಬಿಸಿ, ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಬಲಿ ಪಡೆದ ಮೃತ ದೇಹದ ಭಾಗಗಳನ್ನು ಬೇಯಿಸಿ ತಿನ್ನುವಂತೆ ಹೇಳಿದ್ದ. ನಾವು ಹಾಗೆಯೇ ಮಾಡಿದ್ದೇವೆ ಎಂದು ಆರೋಪಿ ದಂಪತಿ ತಿಳಿಸಿದ್ದಾರೆ.
ಇನ್ನಷ್ಟು ಬಲಿಗೆ ಯತ್ನ: ನರಬಲಿ ಪ್ರಕರಣದ ತನಿಖೆಯಲ್ಲಿ ಇನ್ನಷ್ಟು ಆಘಾತಕಾರಿ ಮಾಹಿತಿಗಳು ಹೊರಬೀಳುತ್ತಿವೆ. ಇಬ್ಬರು ಮಹಿಳೆಯರನ್ನು ನರಬಲಿ ನೀಡಿದ್ದಲ್ಲದೇ, ಇನ್ನಷ್ಟು ಜನರ ಬಲಿಗೂ ಆರೋಪಿಗಳು ಸಂಚು ರೂಪಿಸಿದ್ದರು. ಆರೋಪಿ ದಂಪತಿ ಮತ್ತೊಬ್ಬ ಮಹಿಳೆಯನ್ನೂ ನರಬಲಿಗಾಗಿ ತಿರುವಳ್ಳಕ್ಕೆ ಕರೆತಂದಿದ್ದರು. ಆದರೆ ಮಹಿಳೆ ಮನೆಯವರಿಗೆ ತಾನಿರುವ ಸ್ಥಳದ ಬಗ್ಗೆ ತಿಳಿಸಿದ್ದರು. ಈ ವೇಳೆ ಅವರನ್ನು ಬಲಿಕೊಟ್ಟರೆ ಸಿಕ್ಕಿಬೀಳುವ ಕಾರಣ ಯೋಜನೆಯನ್ನು ಕೈಬಿಟ್ಟಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ.
ಶಂಕಿತ ಮಂತ್ರವಾದಿ ರಶೀದ್ ಕೂಡ ಇದೇ ಉದ್ದೇಶಕ್ಕಾಗಿ ಚಿಕ್ಕ ಮಗು ಸಮೇತ ಕುಟುಂಬವೊಂದನ್ನು ಅದೇ ಸ್ಥಳಕ್ಕೆ ಕರೆತಂದಿದ್ದರು. ಬಳಿಕ ಏನಾಯಿತು ಎಂಬ ಬಗ್ಗೆ ಬಹಿರಂಗವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ: ಆರೋಪಿಗಳನ್ನು ಬುಧವಾರ ಬೆಳಗ್ಗೆ ಎರ್ನಾಕುಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಓದಿ: ಆರ್ಥಿಕ ಏಳಿಗೆಗಾಗಿ ನರಬಲಿ.. ಮಹಿಳೆಯರನ್ನು ಅಪಹರಿಸಿ ತುಂಡು-ತುಂಡಾಗಿ ಕತ್ತರಿಸಿದ ಹಂತಕರು!