ಕೊಚ್ಚಿ(ಕೇರಳ): ಕೊಚ್ಚಿನ್ ದೇವಸ್ವಂ ಬೋರ್ಡ್‌ನ ಅಧೀನದಲ್ಲಿ ಬರುವ ತ್ರಿಪುಣಿತೂರಿನ ಶ್ರೀ ಪೂರ್ಣತ್ರಯೀಶ ದೇವಸ್ಥಾನದಲ್ಲಿ 'ಪಂತ್ರಂದು ನಮಸ್ಕಾರಂ' ಕುರಿತ ಮಾಧ್ಯಮವೊಂದರ ವರದಿ ಆಧರಿಸಿ ಕೇರಳ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದೆ.
'ಪಂತ್ರಂದು ನಮಸ್ಕಾರಂ' ಎಂಬ ಧಾರ್ಮಿಕ ವಿಧಿವಿಧಾನವೊಂದರಲ್ಲಿ ಭಕ್ತರು ಪಾಪ ಪರಿಹಾರಕ್ಕಾಗಿ 12 ಬ್ರಾಹ್ಮಣರ ಪಾದಗಳನ್ನು ತೊಳೆಯುವ ಪದ್ಧತಿ ಈ ದೇವಾಲಯದಲ್ಲಿದೆ ಎಂದು ಮಾಧ್ಯಮದ ವರದಿ ಹೇಳಿತ್ತು. ಇದೇ ವಿಚಾರವಾಗಿ ಕೇರಳ ಹೈಕೋರ್ಟ್ ಸುಮೋಟೋ ದೂರು ದಾಖಲಿಸಿಕೊಂಡಿದೆ.
ನ್ಯಾಯಮೂರ್ತಿ ಅನಿಲ್ ಕೆ.ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ.ಜಿ.ಅಜಿತ್‌ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಚ್ಚಿನ್ ದೇವಸ್ವಂ ಬೋರ್ಡ್‌ನ ವಕೀಲರು ಸುದ್ದಿಯಲ್ಲಿ ಉಲ್ಲೇಖಿಸಿರುವಂತೆ ಭಕ್ತರು ಬ್ರಾಹ್ಮಣರ ಪಾದವನ್ನು ತೊಳೆಯುವುದಿಲ್ಲ. ದೇವಸ್ಥಾನದ ತಂತ್ರಿ 12 ಅರ್ಚಕರ ಪಾದಗಳನ್ನು ತೊಳೆಯುತ್ತಾನೆ ಎಂದಿದ್ದಾರೆ.
ಇದನ್ನೂ ಓದಿ: 'ಅವರು ಜೈಶ್ರೀರಾಮ್ ಎಂದು ಕೂಗಿದ್ರು, ನಾನು ಅಲ್ಲಾಹು ಅಕ್ಬರ್ ಎಂದು ಕೂಗಿದೆ, ಅವರದ್ದೂ ತಪ್ಪಿಲ್ಲ, ನನ್ನದೂ ತಪ್ಪಿಲ್ಲ'
ಈ ಬಗ್ಗೆ ಅಫಿಡವಿಟ್ ಸಲ್ಲಿಸಲು ಕೊಚ್ಚಿನ್ ದೇವಸ್ವಂ ಬೋರ್ಡ್‌ನ ವಕೀಲರಿಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದ್ದು, ಫೆಬ್ರವರಿ 25ರಂದು ನ್ಯಾಯಾಲಯವು ಈ ವಿಷಯವನ್ನು ಮತ್ತೊಮ್ಮೆ ವಿಚಾರಣೆ ನಡೆಸಲಿದೆ.
ಫೆಬ್ರವರಿ 4ರಂದು 'ಕೇರಳ ಕೌಮುದಿ' ದಿನಪತ್ರಿಕೆಯು 'ಪಂತ್ರಂದು ನಮಸ್ಕಾರಂ' ಕುರಿತಂತೆ ವರದಿ ಪ್ರಕಟಿಸಿತ್ತು.