ಕೊಚ್ಚಿ: ತೆಲಂಗಾಣದ ಟಿಆರ್‌ಎಸ್ ಶಾಸಕರನ್ನು ಖರೀದಿಸಲು ಸಂಚು ರೂಪಿಸಿದ ಆರೋಪಕ್ಕೆ ಸಂಬಂಧಿಸಿದಂತೆ, ತನಿಖೆ ಎದುರಿಸುತ್ತಿರುವ ಒಬ್ಬ ವ್ಯಕ್ತಿಯ ಸಹೋದ್ಯೋಗಿಗಳಾಗಿರುವ ಮೂವರಿಗೆ ಕೇರಳ ಹೈಕೋರ್ಟ್ ಶುಕ್ರವಾರ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.
ಇಲ್ಲಿನ ಖಾಸಗಿ ಆಸ್ಪತ್ರೆಯೊಂದರ ಉದ್ಯೋಗಿಗಳಾದ ಮೂವರು ವ್ಯಕ್ತಿಗಳು ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಅವರನ್ನು ಬಂಧಿಸಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು, ಅರ್ಜಿದಾರರನ್ನು ಪೊಲೀಸರು ಇಲ್ಲಿಯವರೆಗೆ ಆರೋಪಿಗಳಾಗಿ ಹಾಜರುಪಡಿಸಿಲ್ಲ ಎಂಬುದನ್ನು ಗಮನಿಸಿದೆ.
ಡಿಸೆಂಬರ್ 5 ರಂದು ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಳ್ಳುವವರೆಗೆ ನ್ಯಾಯಾಲಯವು ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ. ತೆಲಂಗಾಣ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಪರಾಧ ಸಂಹಿತೆಯ ಸೆಕ್ಷನ್ 160 ರ ಅಡಿ ಅವರಿಗೆ ನೋಟಿಸ್ ನೀಡಿದ ನಂತರ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ತೆಲಂಗಾಣದಲ್ಲಿನ ಯಾವುದೇ ರೀತಿಯ ರಾಜಕೀಯ ಪಿತೂರಿಯೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಮೂವರು ತಮ್ಮ ಮನವಿಯಲ್ಲಿ ವಾದಿಸಿದ್ದಾರೆ. ಬಿಜೆಪಿ ಹಿರಿಯ ನಾಯಕ ಬಿ ಎಲ್ ಸಂತೋಷ್ ಮತ್ತು ಕೇರಳದ ಇಬ್ಬರು ವ್ಯಕ್ತಿಗಳಾದ ಜಗ್ಗು ಸ್ವಾಮಿ ಮತ್ತು ತುಷಾರ್ ವೆಲ್ಲಪಲ್ಲಿ, ಬಿ ಶ್ರೀನಿವಾಸ್ ಸೇರಿ ನಾಲ್ವರು ಟಿಆರ್‌ಎಸ್ ಶಾಸಕರನ್ನು ಖರೀದಿಸಲು ಸಂಚು ರೂಪಿಸಿದ ಆರೋಪದ ಮೇಲೆ ತನಿಖೆ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಟಿಆರ್‌ಎಸ್ ಶಾಸಕರ ಖರೀದಿ ಆರೋಪ ಪ್ರಕರಣ: ಬಿಎಲ್ ಸಂತೋಷ್‌ಗೆ ಜಾರಿಯಾಗಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆ
ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮಾ, ನಂದ ಕುಮಾರ್ ಮತ್ತು ಸಿಂಹಯಾಜಿ ಸ್ವಾಮಿ ಎಂಬ ಮೂವರನ್ನು ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ. ಟಿಆರ್‌ಎಸ್ ಶಾಸಕ ಪೈಲಟ್ ರೋಹಿತ್ ರೆಡ್ಡಿ ಅವರು ಅಕ್ಟೋಬರ್ 26 ರಂದು ನಾಲ್ವರು ಶಾಸಕರ ವಿರುದ್ಧ ದೂರು ದಾಖಲಿಸಿದ್ದರು.
ಎಫ್‌ಐಆರ್ ಪ್ರತಿಯ ಪ್ರಕಾರ, ಆರೋಪಿಗಳು ರೋಹಿತ್ ರೆಡ್ಡಿ ಅವರಿಗೆ 100 ಕೋಟಿ ರೂ. ನೀಡುವುದಾಗಿ ಆಮಿಷವೊಡ್ಡಿದ್ದರು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪ್ರತಿಯಾಗಿ ಶಾಸಕರು ಟಿಆರ್‌ಎಸ್ ತೊರೆದು ಮುಂದಿನ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂದು ಹೇಳಿದ್ದರಂತೆ. ಇದಕ್ಕೂ ಮುನ್ನ ತೆಲಂಗಾಣ ಎಸ್‌ಐಟಿ ಸಂತೋಷ್ ಮತ್ತು ಕೇರಳದ ಇಬ್ಬರು ವ್ಯಕ್ತಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆದರೆ, ಅವರು ತನಿಖಾ ಸಮಿತಿಯ ಮುಂದೆ ಹಾಜರಾಗಲಿಲ್ಲ. ಎಸ್‌ಐಟಿಯಿಂದ ಸಮನ್ಸ್ ಪಡೆದಿದ್ದ ಶ್ರೀನಿವಾಸ್ ವಿಚಾರಣೆಗೆ ಹಾಜರಾಗಿದ್ದರು.