ತಿರುವನಂತಪುರಂ(ಕೇರಳ): ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸದ ವೇಳೆ ಮಹಿಳಾ ವೈದ್ಯೆಯೊಬ್ಬರಿಗೆ ಚೂರಿ ಇರಿತಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಹೆಚ್ಚುತ್ತಿರುವ ನಡುವೆಯೇ ಕೇರಳ ಸರ್ಕಾರ ಆರೋಗ್ಯ ಕಾರ್ಯಕರ್ತರ ಸುರಕ್ಷತೆಗಾಗಿ ಕಾನೂನು ಜಾರಿಗೆ ತರಲು ನಿರ್ಧರಿಸಿದೆ. ಆರೋಗ್ಯ ವಲಯದ ಎಲ್ಲ ಉದ್ಯೋಗಿಗಳ ರಕ್ಷಣೆಗಾಗಿ 'ಆಸ್ಪತ್ರೆ ಸಂರಕ್ಷಣಾ ಕಾಯ್ದೆ'ಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಲು ನಿರ್ಧರಿಸಿದೆ. ನೌಕರರಿಗೆ ರಕ್ಷಣೆ, 6 ತಿಂಗಳಿಂದ 7 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ನಿಬಂಧನೆಗಳು ತಿದ್ದುಪಡಿಯಲ್ಲಿ ಸೇರಿವೆ.
ಡಾ.ವಂದನಾ ದಾಸ್ ಹತ್ಯೆ ಹಿನ್ನೆಲೆ ಸಮಗ್ರ ಆಸ್ಪತ್ರೆ ಸಂರಕ್ಷಣಾ ಕಾನೂನು ಮಸೂದೆ ಜಾರಿಗೆ ಸಿದ್ಧತೆ ನಡೆದಿದೆ. ಈ ಕಾಯಿದೆಯು ಆರೋಗ್ಯ ವಲಯದ ನೌಕರರು ಸೇರಿದಂತೆ ಎಲ್ಲ ಉದ್ಯೋಗಿಗಳಿಗೆ ಸುರಕ್ಷತೆ ನೀಡುತ್ತದೆ. ಆಸ್ಪತ್ರೆಗಳಲ್ಲಿನ ಹಿಂಸಾಚಾರಕ್ಕೆ ಆರು ತಿಂಗಳಿಂದ ಏಳು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಬಹುದು. ಅಪರಾಧದ ತೀವ್ರತೆಗೆ ಅನುಗುಣವಾಗಿ ಶಿಕ್ಷೆ ಹೆಚ್ಚಾಗುತ್ತದೆ. ಭಾರತೀಯ ದಂಡ ಸಂಹಿತೆ ಕೊಲೆ ಮತ್ತು ಕೊಲೆ ಯತ್ನಕ್ಕೆ ಗರಿಷ್ಠ ಶಿಕ್ಷೆಯನ್ನು ವಿಧಿಸುತ್ತದೆ. ಆರೋಗ್ಯ ಕಾರ್ಯಕರ್ತರ ಮೌಖಿಕ ನಿಂದನೆ ಕೂಡ ಈ ಕಾಯಿದೆ ಪ್ರಕಾರ ಶಿಕ್ಷಾರ್ಹವಾಗಿದೆ.
ವೈದ್ಯರು, ದಾದಿಯರು, ವೈದ್ಯಕೀಯ ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಲ್ಲದೆ ಭದ್ರತಾ ಸಿಬ್ಬಂದಿ ಕೂಡ ಹೊಸ ಕಾನೂನಿನ ವ್ಯಾಪ್ತಿಗೆ ಬರುತ್ತಾರೆ. ಹೊಸ ಕಾನೂನು ಆಸ್ಪತ್ರೆ ಕಟ್ಟಡಗಳು ಮತ್ತು ಉಪಕರಣಗಳಿಗೆ ಉಂಟಾದ ಹಾನಿಗೆ ಪರಿಹಾರವನ್ನು ಸಂಗ್ರಹಿಸಲು ಒಂದು ವಿಭಾಗವನ್ನು ಒಳಗೊಳ್ಳಲಿದೆ. ಇವುಗಳ ಉಲ್ಲಂಘನೆ ವರದಿಯಾದಾಗ ತ್ವರಿತ ತನಿಖೆ ಮತ್ತು ಚಾರ್ಜ್ ಶೀಟ್‌ಗಳನ್ನು ಸಲ್ಲಿಸಲಾಗುತ್ತದೆ. ಅಂತಹ ಅಪರಾಧಗಳಲ್ಲಿ ಭಾಗಿಯಾಗಿರುವವರಿಗೆ ತ್ವರಿತ ಶಿಕ್ಷೆಯನ್ನು ನೀಡಬಹುದು.
ಹೊಸ ಕಾನೂನಿನ ಭಾಗವಾಗಿ ಆರೋಗ್ಯ ವಲಯದ ವಿವಿಧ ನೌಕರರ ಸಂಘಟನೆಗಳು ನೀಡಿರುವ ಬೇಡಿಕೆಗಳನ್ನು ಸಹ ಸರ್ಕಾರ ಪರಿಶೀಲಿಸುತ್ತಿದೆ. ಗೃಹ, ಆರೋಗ್ಯ ಮತ್ತು ಕಾನೂನು ಕಾರ್ಯದರ್ಶಿಗಳು ವಿವಿಧ ಹಂತಗಳಲ್ಲಿ ನಿಬಂಧನೆಗಳನ್ನು ಚರ್ಚಿಸುತ್ತಾರೆ. ಕಾನೂನು ಇಲಾಖೆ ಆಸ್ಪತ್ರೆ ಸಂರಕ್ಷಣಾ ಕಾಯಿದೆಯ ರಚನೆಯನ್ನು ಪರಿಗಣಿಸುತ್ತಿದೆ. ಈ ಕಾನೂನನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ನಿರ್ಧರಿಸಲಾಗಿದೆ.
ವಂದನಾ ದಾಸ್ ಹತ್ಯೆಯ ನಂತರ, ಮುಷ್ಕರ ನಡೆಸಿದ ವೈದ್ಯರಿಗೆ ಸರ್ಕಾರ ತ್ವರಿತ ಕಾನೂನು ಜಾರಿ ಭರವಸೆ ನೀಡಿತ್ತು. ಬಳಿಕ ವೈದ್ಯರು ಮುಷ್ಕರ ಹಿಂಪಡೆದಿದ್ದರು. ಹೊಸ ಕಾನೂನಿಗೆ ವಂದನಾ ದಾಸ್ ಹೆಸರಿಡುವ ಬೇಡಿಕೆಯನ್ನೂ ಸರ್ಕಾರ ಪರಿಗಣಿಸುತ್ತಿದೆ. ಮೇ 10 ರಂದು ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ವೈದ್ಯ ವಂದನಾ ದಾಸ್ ಅವರನ್ನು ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ.
ಡಾ. ವಂದನಾ ಹತ್ಯೆ, ತನಿಖೆ ಅಪರಾಧ ವಿಭಾಗಕ್ಕೆ: ಡಾ.ವಂದನಾ ದಾಸ್ ಹತ್ಯೆ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ ವಹಿಸಿಕೊಂಡಿದೆ. ಕೊಲ್ಲಂ ಗ್ರಾಮಾಂತರ ಎಸ್ಪಿ ಸುನೀಲ್ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ. ಆರೋಗ್ಯ ಕ್ಷೇತ್ರದ ವಿವಿಧ ಸಂಘಟನೆಗಳ ಬೇಡಿಕೆಯನ್ನು ಪರಿಗಣಿಸಿ ವಂದನಾ ದಾಸ್ ಹತ್ಯೆಯನ್ನು ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲಾಗಿತ್ತು. ಸರ್ಕಾರಿ ವ್ಯವಸ್ಥೆಗಳ ವೈಫಲ್ಯದಿಂದ ಕೊಲೆ ನಡೆದಿದೆ ಎಂಬ ಟೀಕೆಗಳ ಹಿನ್ನೆಲೆ ಪ್ರಕರಣವನ್ನು ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲಾಗಿತ್ತು. .
ಇದನ್ನೂ ಓದಿ: ಕೇರಳ ವೈದ್ಯೆ ಕೊಂದ ಕುಡುಕ ಹಂತಕನಿಗೆ 14 ದಿನ ನ್ಯಾಯಾಂಗ ಬಂಧನ, ಕೊಲೆ ಕಾರಣ ನಿಗೂಢ