ತಿರುವನಂತಪುರಂ (ಕೇರಳ): ಕೇರಳದಲ್ಲಿ ಸರ್ಕಾರ ಮತ್ತು ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ನಡುವೆ ತಿಕ್ಕಾಟ ಮುಂದುವರೆದಿದೆ. ಸರ್ಕಾರ ರವಾನಿಸಿದ್ದ 11 ಸುಗ್ರೀವಾಜ್ಞೆಗಳಿಗೆ ರಾಜಪಾಲರು ಅನುಮೋದನೆ ನೀಡಲು ನಿರಾಕರಿಸುವ ಬೆನ್ನಲ್ಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಇವುಗಳನ್ನು ಪಾಸ್ ಮಾಡಿಕೊಳ್ಳಲೆಂದೇ ವಿಶೇಷ ಅಧಿವೇಶನ ಕರೆದಿದೆ.
ರಾಜ್ಯಪಾಲರ ಅಂಕಿತಕ್ಕಾಗಿ ಸರ್ಕಾರ ಈ ಸುಗ್ರೀವಾಜ್ಞೆಗಳನ್ನು ಕಳುಹಿಸಲಾಗಿತ್ತು. ಆದರೆ, ಎರಡು ದಿನಗಳ ಹಿಂದೆಯಷ್ಟೇ ರಾಜಪಾಲ ಯಾವುದೇ ದಾಖಲೆಗಳನ್ನು ಓದದೆ ಸಹಿ ಹಾಕಲು ನಿರಾಕರಿಸಿದ್ದರು. ಹೀಗಾಗಿಯೇ ಮರು ಪ್ರಕಟಣೆಯಾಗಬೇಕಿದ್ದ ಸುಗ್ರೀವಾಜ್ಞೆಗಳು ರದ್ದಾಗಿವೆ.
ಈಗ ರಾಜ್ಯಪಾಲರಿಗೆ ಸೆಡ್ಡು ಹೊಡೆದಿರುವ ಪಿಣರಾಯಿ ವಿಜಯನ್ ಸರ್ಕಾರ ಸಚಿವ ಸಂಪುಟ ಸಭೆ ಕರೆದು, 10 ದಿನಗಳ ವಿಶೇಷ ಅಧಿವೇಶನ ನಡೆಸಲು ತೀರ್ಮಾನಿಸಿದೆ. ಈ ಅಧಿವೇಶನದಲ್ಲಿ ಮಸೂದೆಗಳನ್ನು ಮಂಡಿಸಿ ಸದನದಲ್ಲೇ ಅಂಗೀಕಾರ ಪಡೆಯುವ ಉದ್ದೇಶ ಸರ್ಕಾರದ್ದು. 140 ಸದಸ್ಯ ಬಲದ ವಿಧಾನಸಭೆಯಲ್ಲಿ 99 ಸದಸ್ಯರು ಆಡಳಿತಾರೂಢ ಎಡಪಕ್ಷಗಳಿಗೆ ಸೇರಿದ್ದು, ಈ ಎಲ್ಲ ಮಸೂದೆಗಳು ಕ್ಷಣಾರ್ಧದಲ್ಲಿ ಅಂಗೀಕಾರಗೊಳ್ಳುವ ನಿರೀಕ್ಷೆ ಇದೆ.
ಕಳೆದ ವಾರ ರಾಜ್ಯಪಾಲರು ಉತ್ತರ ಭಾರತ ಪ್ರವಾಸಕ್ಕೆ ಹೊರಡುವ ಒಂದು ದಿನ ಮೊದಲು 11 ಸುಗ್ರೀವಾಜ್ಞೆಗಳನ್ನು ಸರ್ಕಾರ ಕಳುಹಿಸಿತ್ತು. ಸದ್ಯ ರಾಜ್ಯಪಾಲರು ದೆಹಲಿಯಲ್ಲಿದ್ದು, ಆಗಸ್ಟ್ 12ರಂದು ಕೇರಳಕ್ಕೆ ಮರಳಲಿದ್ದಾರೆ. ಇತ್ತ, ಅಧಿವೇಶನ ನಡೆಸುವ ಬಗ್ಗೆ ರಾಜ್ಯಪಾಲರಿಗೆ 14 ದಿನಗಳು ಮುಂಚಿತವಾಗಿ ನೋಟಿಸ್ ನೀಡಬೇಕು. ಹೀಗಾಗಿಯೇ ಸ್ಪೀಕರ್ ಜೊತೆ ಚರ್ಚಿಸಿ ಸರ್ಕಾರ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ₹104 ಕೋಟಿ ವಂಚನೆ ಆರೋಪ ಹೊತ್ತ ಕೇರಳದ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಇಡಿ ದಾಳಿ