ನವದೆಹಲಿ: ತಮಿಳುನಾಡು ವಿಧಾನಸಭೆ ಅಂಗೀಕರಿಸಿರುವ ಹಲವು ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕದೇ ಅನಿರ್ದಿಷ್ಟಾವಧಿಗೆ ಉಳಿಸಿಕೊಂಡಿದ್ದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾ ಮಾಡಿದ್ದನ್ನು ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ಹಲವು ಬಿಲ್ಗಳಿಗೆ ಒಪ್ಪಿಗೆ ನೀಡದೇ ಬಾಕಿ ಉಳಿಸಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ರಾಜ್ಯಪಾಲರ ವಿರುದ್ಧ ಸರ್ಕಾರ ಸಲ್ಲಿಸಿದ ಎರಡನೇ ಅರ್ಜಿ ಇದಾಗಿದೆ. ಕಳೆದ ವರ್ಷ ಹೈಕೋರ್ಟ್ ಆದೇಶದ ವಿರುದ್ಧವೂ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
ಅನಿರ್ದಿಷ್ಟಾವಧಿ ತಡೆ ಅಧಿಕಾರವಿದೆಯೇ?: ರಾಜ್ಯದ ಶಾಸಕಾಂಗ ಸಭೆಯು ಅಂಗೀಕರಿಸಿದ ವಿಧೇಯಕಗಳನ್ನು ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಿದಾಗ ಅವರು, ಸಂವಿಧಾನದ 200ನೇ ವಿಧಿಯಡಿ ಅನಿರ್ದಿಷ್ಟಾವಧಿವರೆಗೆ ಉಳಿಸಿಕೊಳ್ಳುವ ಸಾಂವಿಧಾನಿಕ ಅಧಿಕಾರ ಹೊಂದಿದ್ದಾರೆಯೇ ಎಂದು ಸರ್ಕಾರ ಪ್ರಶ್ನಿಸಿದೆ.
ಸಂವಿಧಾನದ 200 ನೇ ವಿಧಿಯ ಅಡಿ ರಾಜ್ಯಪಾಲರು ವಿವೇಚನಾ ಅಧಿಕಾರವನ್ನು ಚಲಾಯಿಸದೇ ಅನಿರ್ದಿಷ್ಟಾವಧಿಗೆ ಮಸೂದೆಗಳನ್ನು ತಡೆಹಿಡಿಯುತ್ತಿದ್ದಾರೆ. ರಾಜ್ಯಪಾಲರ ಈ ನಡೆ ಪ್ರಜಾಸತ್ತಾತ್ಮಕ ಮೌಲ್ಯಗಳು, ಸರ್ಕಾರದ ಸಚಿವ ಸಂಪುಟದ ಕರ್ತವ್ಯಗಳಿಗೆ ಅಡ್ಡಿಯುಂಟಾಗುತ್ತದೆ. ಇದನ್ನು ನಿರಂಕುಶತ್ವ ಎಂದು ಘೋಷಿಸಲು ಸರ್ಕಾರ ಕೋರಿತು. ರಾಜ್ಯಪಾಲರ ವಿಳಂಬ ನೀತಿ ಪ್ರಜಾಪ್ರಭುತ್ವದಲ್ಲಿನ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ಹಿನ್ನಡೆಯಾಗಿದೆ ಎಂದು ಸರ್ಕಾರ ವಾದಿಸಿತು.
2 ವರ್ಷದಿಂದ ಮಸೂದೆಗಳು ಬಾಕಿ: ಪ್ರಮುಖ ಮೂರು ಸೇರಿದಂತೆ ಹಲವು ವಿಧೇಯಕಗಳನ್ನು ದೀರ್ಘಾವಧಿಯವರೆಗೆ ಬಾಕಿ ಇರಿಸಿಕೊಳ್ಳುವ ಮೂಲಕ ರಾಜ್ಯಪಾಲರು ರಾಜ್ಯದ ಜನತೆಗೆ ಹಾಗೂ ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಅಪಮಾನ ಮಾಡಿದ್ದಾರೆ. 2 ವರ್ಷಕ್ಕಿಂತ ಹೆಚ್ಚು ಕಾಲ ಬಿಲ್ಗಳನ್ನು ತಮ್ಮಲ್ಲೇ ಉಳಿಸಿಕೊಂಡಿರುವುದು ಸರ್ಕಾರಿ ಕೆಲಸಕ್ಕೆ ಅಡ್ಡಿಯಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
200ನೇ ವಿಧಿ ಅನ್ವಯ ತಮಗೆ ವಿಧೇಯಕಗಳಿಗೆ ಇಷ್ಟವಾದಾಗ ಒಪ್ಪಿಗೆ ನೀಡುವ ಸಂಪೂರ್ಣ ವಿವೇಚನಾಧಿಕಾರ ತಮಗೆ ಇದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದು, ಇದು ಆಡಳಿತವನ್ನು ಬುಡಮೇಲು ಮಾಡಿದಂತಾಗುತ್ತದೆ ಎಂದು ಸರ್ಕಾರ ಹೇಳಿದೆ.
3 ಮಸೂದೆಗಳು 2 ವರ್ಷ, ಇತರ ಮೂರು 1 ವರ್ಷ ಸೇರಿದಂತೆ 8 ಮಸೂದೆಗಳು ಅನಿರ್ದಿಷ್ಟ ಅವಧಿಯಿಂದ ಬಾಕಿ ಉಳಿದಿವೆ. ರಾಜ್ಯಪಾಲರ ನಿಷ್ಕ್ರಿಯತೆಗೆ ಸಂಬಂಧಿಸಿದಂತೆ ಸೂಕ್ತ ಆದೇಶಗಳನ್ನು ನೀಡಬೇಕು ಎಂದು ಕೇರಳ ಸರ್ಕಾರ ಅರ್ಜಿಯಲ್ಲಿ ಕೋರಿದೆ.
ದೀರ್ಘ ಮತ್ತು ಅನಿರ್ದಿಷ್ಟ ಅವಧಿಯವರೆಗೆ ಮಸೂದೆಗಳನ್ನು ಬಾಕಿ ಇರಿಸಿದ ರಾಜ್ಯಪಾಲರ ನಡವಳಿಕೆಯು ಸ್ಪಷ್ಟವಾಗಿ ನಿರಂಕುಶವಾಗಿದೆ. ಸಂವಿಧಾನದ 14 ನೇ ವಿಧಿಯನ್ನು (ಸಮಾನತೆಯ ಹಕ್ಕು) ಉಲ್ಲಂಘಿಸುತ್ತದೆ. ಶಾಸಕಾಂಗ ಜಾರಿಗೊಳಿಸಿದ ಅಭಿವೃದ್ಧಿ ಮಸೂದೆಗಳನ್ನು ನಿರಾಕರಿಸುವ ಮೂಲಕ ಸಂವಿಧಾನದ 21 ನೇ ವಿಧಿ (ಜೀವನದ ಹಕ್ಕು) ಅಡಿಯಲ್ಲಿ ಕೇರಳ ರಾಜ್ಯದ ಜನರ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ : ಆರೋಪಿ ಖುಲಾಸೆಗೊಳಿಸಿದ್ದ ಆದೇಶ ಪ್ರಶ್ನಿಸಿ ಸಿಬಿಐ ಹೈಕೋರ್ಟ್ಗೆ ಅರ್ಜಿ