ತಿರುವನಂತಪುರಂ: ವರದಕ್ಷಿಣೆ ಕಿರುಕುಳ ತಡೆಯುವ ನಿಟ್ಟಿನಲ್ಲಿ ದಿನದ 24 ಗಂಟೆಯೂ ಕಾರ್ಯಾಚರಿಸುವ ಸಹಾಯವಾಣಿ ತೆರೆಯುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆ ನೀಡಿದ್ದಾರೆ. ಕೊಲ್ಲಂ ಜಿಲ್ಲೆಯಲ್ಲಿ ಯುವತಿಯೊಬ್ಬಳು ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಳಿಕ ಸಿಎಂ ಈ ವಿಷಯನ್ನು ತಿಳಿಸಿದ್ದಾರೆ.
ಕಳೆದ ಸೋಮವಾರ ಕೊಲ್ಲಂ ಜಿಲ್ಲೆಯ 24 ವರ್ಷದ ಯುವತಿ ವಿಸ್ಮಯ ವಿ.ನಾಯರ್ ಎಂಬಾಕೆ ಸಂಸ್ಥಂಕೊಟ್ಟದ ಆಕೆಯ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ತಾಳಲಾರದೆ ವಿಸ್ಮಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ಇದು ನನ್ನ ಕೊನೆ ಫೇಸ್ಬುಕ್ ಪೋಸ್ಟ್... ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ 24ರ ಯುವತಿ
ಮೃತ ವಿಸ್ಮಯಾಳ ಸಂಬಂಧಿಕರ ಪ್ರಕಾರ, ಆಕೆಯ ಗಂಡ ಎಸ್. ಕಿರಣ್ ಕುಮಾರ್ ಎಂಬಾತ ಮೋಟಾರು ವಾಹನ ಇಲಾಖೆಯ ಉದ್ಯೋಗಿಯಾಗಿದ್ದಾನೆ. ಆತನಿಗೆ ಮದುವೆ ಸಮಯದಲ್ಲಿ ವರದಕ್ಷಿಣೆ ರೂಪದಲ್ಲಿ ನೀಡಲಾಗಿರುವ ಕಾರಿಗೆ ಸಂಬಂಧಪಟ್ಟಂತೆ ಪತ್ನಿಗೆ ಕಿರುಕುಳ ಕೊಡುತ್ತಿದ್ದ ಎನ್ನಲಾಗಿದೆ. ಆರೋಪಕ್ಕೆ ಸಾಕ್ಷಿ ಎಂಬಂತೆ ವಿಸ್ಮಯಾಳ ಮೃತದೇಹದ ಮೇಲೆ ಗಾಯಗಳಾಗಿರುವ ಫೋಟೋ ಆಕೆಯ ಸಾವಿನ ಬಳಿಕ ಹರಿದಾಡುತ್ತಿವೆ.
ಯುವತಿಯ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಪಿಣರಾಯಿ ವಿಜಯನ್, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ವರದಕ್ಷಿಣೆ ಕಿರುಕುಳ ಸಂಬಂಧಿತ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ವರದಕ್ಷಿಣೆ ನಿಷೇಧಿಸಿ ಆರು ದಶಕಗಳು ಕಳೆದರೂ, ಇನ್ನೂ ಹಲವು ವಿಧಗಳಲ್ಲಿ ವರದಕ್ಷಿಣೆ ನೀಡುವ ಪಡೆಯುವ ಪದ್ದತಿ ಚಾಲ್ತಿಯಲ್ಲಿವೆ. ಇದು ಒಂದು ಗಂಭೀರ ಸಾಮಾಜಿಕ ಸಮಸ್ಯೆ. ನಾವು ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಹಿಂಸೆಗಳನ್ನು ತಡೆಯಬೇಕಾಗಿದೆ. ಈ ವಿಚಾರದಲ್ಲಿ ಲಿಂಗಬೇಧ ಮರೆತು ರಾಜಿಯಿಲ್ಲದ ನಿಲುವು ತೆಗೆದುಕೊಳ್ಳಬೇಕಾಗಿದೆ. ಅದು ಗಂಡನ ಮನೆಯಾಗಿರಲಿ, ಪತ್ನಿಯ ಮನೆಯಾಗಿರಲಿ ಎಂದು ಹೇಳಿದ್ದಾರೆ.
ಸಮಾಜದಲ್ಲಿ ಮಹಿಳೆಯ ದುರ್ಬಳಕೆ ಮತ್ತು ಅದಕ್ಕೆ ಮಹಿಳೆಯರು ಯಾವ ರೀತಿ ಪ್ರತಿರೋಧ ಒಡ್ಡುತ್ತಿದ್ದಾರೆ ಎಂಬುವುದರ ಬಗ್ಗೆ ಮಾತನಾಡಿದ ಸಿಎಂ, ವರದಕ್ಷಿಣೆ ಕೇಳುವುದಾದರೆ, ನಾವು ಮದುವೆ ಆಗುವುದಿಲ್ಲ ಎಂದು ಹೇಳುವ ಅನೇಕ ಹುಡುಗಿಯರನ್ನು ನಾವು ನೋಡಿದ್ದೇವೆ. ಮದುವೆ ಕೇವಲ ಕುಟುಂಬದ ಘನತೆ ಮತ್ತು ಮೌಲ್ಯ ತೋರಿಸುವ ವಿಷಯ ಅಲ್ಲ. ಹುಡುಗಿಯನ್ನು ಮದುವೆ ಮಾಡಿ ಕೊಡುವಾಗ ಏನು ನೀಡಿದ್ದೇವೆ, ಎಷ್ಟು ನೀಡಿದ್ದೇವೆ ಎಂಬುವುದನ್ನು ಕುಟುಂಬದ ಘನತೆಯಾಗಿ ಅಳತೆ ಮಾಡಬಾರದು. ಹಾಗೆ ಯೋಚಿಸುವವರು ತಮ್ಮ ಮಕ್ಕಳನ್ನು ಮಾರಾಟ ಸರಕುಗಳಾಗಿ ಪರಿವರ್ತಿಸುತ್ತಿದ್ದಾರೆ ಎಂಬುವುದನ್ನು ನೆನಪಿನಲ್ಲಿಡಬೇಕು ಎಂದು ಸಿಎಂ ಬಹಳ ಮಾರ್ಮಿಕವಾಗಿ ನುಡಿದಿದ್ದಾರೆ.