ತಿರುವನಂತಪುರಂ(ಕೇರಳ): ಪ್ರತಿಪಕ್ಷಗಳ ಟೀಕೆಗಳ ಹೊರತಾಗಿಯೂ ಆರ್ಥಿಕ ಕುಸಿತದ ಕಾರಣ ನೀಡಿರುವ ಕೇರಳ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತ ಮಾಡಲು ಸಾಧ್ಯವಿಲ್ಲ ಎಂದು ತನ್ನ ನಿಲುವನ್ನು ಪುನರುಚ್ಚರಿಸಿದೆ.
ಕೋವಿಡ್-19 ಅವಧಿಯಲ್ಲಿ ಇತರೆ ಹಲವು ರಾಜ್ಯಗಳು ಇಂಧನ ತೆರಿಗೆಯನ್ನು ಹೆಚ್ಚಿಸುವ ಜೊತೆ ಹೊಸದಾಗಿ ಸೆಸ್ ಅನ್ನು ಪರಿಚಯಿಸಿದ್ದವು. ಆದರೆ ಕೇರಳ ಸರ್ಕಾರ ಹಾಗೆ ಮಾಡಲಿಲ್ಲ ಎಂದು ರಾಜ್ಯ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ತಿಳಿಸಿದ್ದಾರೆ.
ಇಂಧನದ ಮೇಲಿನ ಹೆಚ್ಚುವರಿ ತೆರಿಗೆಯನ್ನು ಕಡಿತಗೊಳಿಸದಿರುವ ರಾಜ್ಯದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಚಿವರು, ಕಳೆದ ಆರು ವರ್ಷಗಳಿಂದ ಕೇರಳವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯ-ತೆರಿಗೆಯನ್ನು ಹೆಚ್ಚಿಸಿಲ್ಲ. ಆದರೆ ಒಮ್ಮೆ ಕಡಿಮೆ ಮಾಡಿದೆ ಎಂದು ಹೇಳಿದರು.
ಕೋವಿಡ್-19 ಮತ್ತು ಇತ್ತೀಚಿನ ವಿಪತ್ತುಗಳಿಂದ ಹಾನಿಗೊಳಗಾದವರಿಗೆ ರಾಜ್ಯ ಸರ್ಕಾರವು ಹಲವಾರು ಆರ್ಥಿಕ ಪರಿಹಾರ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿದೆ. ತುಟ್ಟಿಭತ್ಯೆಯನ್ನು ಶೇ.6 ರಷ್ಟು ಹೆಚ್ಚಿಸಿದೆ. ಹಾಗಾಗಿ ಇಂಧನ ಬೆಲೆಯ ಮೇಲಿನ ತೆರಿಗೆ ಕಡಿತ ಮಾಡಿದರೆ ಆರ್ಥಿಕ ಪರಿಹಾರ ಪ್ಯಾಕೇಜ್‌ಗಳ ಮೇಲೆ ಇದು ಪರಿಣಾಮ ಬೀರಬಹುದು ಎಂದು ವಿವರಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್‌ಗೆ ಕೇಂದ್ರ ಮತ್ತು ರಾಜ್ಯ ವಿಧಿಸಿರುವ ತೆರಿಗೆಗಳು ವಿಭಿನ್ನವಾಗಿವೆ ಎಂದಿರುವ ಅವರು, ಕೇಂದ್ರ ಸರ್ಕಾರವು ತನ್ನ ತೆರಿಗೆ ಅಥವಾ ಇಂಧನದ ಮೂಲ ಬೆಲೆಯನ್ನು ಕಡಿಮೆ ಮಾಡಿದಾಗ ಅದು ಸಾಮಾನ್ಯವಾಗಿ ರಾಜ್ಯ ತೆರಿಗೆಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ರಾಜ್ಯವು ಮತ್ತೆ ತೆರಿಗೆಯನ್ನು ಕಡಿಮೆ ಮಾಡುವ ಅಗತ್ಯವಿಲ್ಲ. ಕೇಂದ್ರವು ತನ್ನ ತೆರಿಗೆಯನ್ನು ಡೀಸೆಲ್ ಮತ್ತು ಪೆಟ್ರೋಲ್‌ಗೆ ಕ್ರಮವಾಗಿ 10 ಮತ್ತು 5 ರೂ.ಗಳಷ್ಟು ಕಡಿಮೆಗೊಳಿಸಿದಾಗ ಕೇರಳದಲ್ಲಿ 12.30 ಹಾಗೂ 6.56 ರೂ. ಕಡಿತವಾಗಲಿದೆ. ರಾಜ್ಯ ಸರ್ಕಾರ ಹೆಚ್ಚುವರಿ 2.30 ಮತ್ತು 1.56 ರೂಪಾಯಿಯನ್ನು ಭರಿಸಲಿದೆ ಎಂದು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವ ಕೇಂದ್ರದ ಪ್ರಸ್ತುತ ನಿರ್ಧಾರವು ವಿವಿಧ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಹಿನ್ನಡೆಗೆ ಕಾರಣವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.