ಕೊಲ್ಲಂ (ಕೇರಳ) : ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ತಮ್ಮ ಭದ್ರತೆ ನಿರಾಕರಿಸಿ ಕೋಯಿಕ್ಕೋಡಿನ ಜನನಿಬಿಡ ಪ್ರದೇಶದಲ್ಲಿ ಓಡಾಡಿರುವ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯಪಾಲರ ನಡೆಯನ್ನು ಟೀಕಿಸಿದ್ದಾರೆ. ರಾಜ್ಯಪಾಲರು ಸರ್ಕಾರದ ಶಿಷ್ಟಾಚಾರವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಪಿಣರಾಯಿ ವಿಜಯನ್, ಜವಾಬ್ದಾರಿಯುತ ಸ್ಥಾನವನ್ನು ಹೊಂದಿರುವ ರಾಜ್ಯಪಾಲರು ಕೆಲವು ಬದ್ಧತೆಯನ್ನು ಹೊಂದಿರಬೇಕಾಗುತ್ತದೆ. ಏಕಾಏಕಿ ಅಧಿಕಾರಿಗಳಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡದೇ ಕೋಯಿಕ್ಕೋಡ್ನ ಎಸ್ಎಂ ರಸ್ತೆಗೆ ಭೇಟಿ ನೀಡಿರುವ ಕ್ರಮ ಮಾದರಿಯಲ್ಲ ಎಂದು ಹೇಳಿದರು.
ತಮ್ಮ ದಿಢೀರ್ ಭೇಟಿ ಮೂಲಕ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಕೇರಳ ಎಷ್ಟು ಸುರಕ್ಷಿತವಾಗಿದೆ. ಇಲ್ಲಿನ ಕಾನೂನು ಸುವ್ಯವಸ್ಥೆ ಎಷ್ಟು ಸ್ಥಿರವಾಗಿದೆ ಎಂಬುದನ್ನು ಇಡೀ ದೇಶಕ್ಕೆ ಸಾಬೀತುಪಡಿಸಿದ್ದಾರೆ. ಒಬ್ಬ ರಾಜ್ಯಪಾಲರು ಯಾವುದೇ ಭದ್ರತಾ ಕ್ರಮಗಳನ್ನು ಕೈಗೊಳ್ಳದೇ ರಸ್ತೆಗಳಲ್ಲಿ ಓಡಾಡಬಹುದಾದ ಉತ್ತಮ ವ್ಯವಸ್ಥೆ ಕೇರಳವಲ್ಲದೇ ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ.
ರಾಜ್ಯಪಾಲರ ವಿರುದ್ಧ ವಿದ್ಯಾರ್ಥಿ ಸಂಘಟನೆ ನಡೆಸಿದ ಪ್ರತಿಭಟನೆಯನ್ನು ಸಮರ್ಥಿಸಿಕೊಂಡ ವಿಜಯನ್, ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿದವರು ಗೂಂಡಾಗಳೋ, ಕ್ರಿಮಿನಲ್ಗಳೋ ಅಲ್ಲ. ಅವರು ನಮ್ಮ ಭವಿಷ್ಯದ ಪ್ರಜೆಗಳು. ಈ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಪಾಲರ ತಪ್ಪುಗಳನ್ನು ಪ್ರಶ್ನಿಸುತ್ತಿದ್ದಾರೆ. ಇವರು ಕೇರಳದ ವಿಶಿಷ್ಟತೆ, ಇದೇ ಪ್ರಜಾಪ್ರಭುತ್ವದ ಶಕ್ತಿ ಎಂದು ಹೇಳಿದರು. ರಾಜ್ಯಪಾಲರ ಮನಸ್ಸಿನಲ್ಲಿ ಏನಿದೆಯೋ ನಮಗೆ ಗೊತ್ತಿಲ್ಲ . ಈ ಬಗ್ಗೆ ಅವರು ಮಾತ್ರ ತಿಳಿಸಬಹುದು ಎಂದು ಹೇಳಿದರು.
ರಾಜ್ಯಪಾಲರ ಭದ್ರತಾ ವಿಚಾರವಾಗಿ ಮಾತನಾಡಿ, ರಾಜ್ಯಪಾಲರು ಇಷ್ಟಪಟ್ಟರೂ, ಇಷ್ಟಪಡದಿದ್ದರೂ ರಾಜ್ಯ ಪೊಲೀಸರು ಅವರ ಭದ್ರತೆ ಖಾತ್ರಿ ಪಡಿಸುತ್ತಾರೆ. ರಾಜ್ಯಪಾಲರಿಗೆ ಯಾವುದೇ ಭದ್ರತೆಯನ್ನು ಕಡಿತಗೊಳಿಸುವುದಿಲ್ಲ. ಝೆಡ್ಪ್ಲಸ್ ಭದ್ರತೆ ಒದಗಿಸುವುದಾಗಿ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸೋಮವಾರ ಕೋಯಿಕ್ಕೋಡ್ ನಗರದ ಎಸ್ಎಂ ಸ್ಟ್ರೀಟ್ ಮತ್ತು ಮನಂಚಿರಾದ ಜನನಿಬಿಡ ಪ್ರದೇಶಗಳಿಗೆ ದಿಢೀರ್ ಭೇಟಿ ನೀಡಿದ್ದರು. ಎಸ್ಎಫ್ಐ, ಡಿವೈಎಫ್ಐ ಪ್ರತಿಭಟನೆಯ ನಡುವೆಯೂ ರಾಜ್ಯಪಾಲರು ಜನನಿಬಿಡ ರಸ್ತೆಗಳಲ್ಲಿ ನಡೆದುಕೊಂಡು ಹೋಗಿ ಸಾರ್ವಜನಿಕರು ಮತ್ತು ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಪೊಲೀಸ್ ಭದ್ರತೆ ನಿರಾಕರಿಸಿದ್ದರು. ಈ ಸಂಬಂಧ ಸಿಎಂ ಪಿಣರಾಯಿ ವಿಜಯನ್ ರಾಜ್ಯಪಾಲರ ನಡೆ ಟೀಕಿಸಿದ್ದಾರೆ.
ಇದನ್ನೂ ಓದಿ : ಪೊಲೀಸ್ ಭದ್ರತೆ ನಿರಾಕರಿಸಿ ಜನನಿಬಿಡ ರಸ್ತೆಗಳಲ್ಲಿ ಓಡಾಡಿದ ಕೇರಳ ರಾಜ್ಯಪಾಲ!