ಬೆಂಗಳೂರು: ಸಾಮಾನ್ಯವಾಗಿ ಮನೆ, ಕಾರು, ವಿದ್ಯಾಭ್ಯಾಸ ಹಾಗು ಇತರೆ ಜೀವನದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಉದ್ದೇಶದಿಂದ ಸಾಲಗಳಿಗೆ ಅರ್ಜಿ ಸಲ್ಲಿಸುತ್ತೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಮಾತ್ರ ಸಾಲ ಪಡೆಯುತ್ತಿರುವುದು ವಿಶೇಷ ಕಾರಣಕ್ಕೆ!. ಗಿರಿ ಶಿಖರಗಳನ್ನು ಏರುವ ಹುಮ್ಮಸ್ಸು ಹೊಂದಿರುವ ಈ ವ್ಯಕ್ತಿ ಅದಕ್ಕಾಗಿ ಸಾಲ ಮಾಡುತ್ತಿದ್ದಾರೆ.
ಕೇರಳ ರಾಜ್ಯ ಸೆಕ್ರೆಟಿರಿಯಟ್ನ ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿರುವ 36 ವರ್ಷದ ಸರ್ಕಾರಿ ಉದ್ಯೋಗಿ ಶೇಖ್ ಹಸನ್ ಖಾನ್ ಅವರಿಗೆ ಗಿರಿ ಶಿಖರಗಳನ್ನು ಹತ್ತುವ ಕನಸು. ಪತ್ತನಂತಿಟ್ಟ ಜಿಲ್ಲೆಯ ಪಂದಳಂ ನಿವಾಸಿಯಾಗಿರುವ ಇವರು, ಈಗಾಗಲೇ ಮೌಂಟ್ ಎವರೆಸ್ಟ್ ಶಿಖರ ಏರಿದ್ದು, ಜಗತ್ತಿನಲ್ಲಿರುವ ಅತಿ ಎತ್ತರದ ಶಿಖರಗಳನ್ನೂ ಏರಬೇಕು ಎಂಬ ಕನಸಿದೆ.
ಗಿರಿಗಳನ್ನು ಹತ್ತಲು ವ್ಯವಸ್ಥಿತವಾದ ತರಬೇತಿ, ಅಗತ್ಯ ಉಪಕರಣ, ಪ್ರವಾಸ ವೆಚ್ಚಗಳು ದುಬಾರಿ. ಇದೇ ಕಾರಣಕ್ಕೆ ಸಾಲಗಳನ್ನು ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈಗಾಗಲೇ ಮೌಂಟ್ ಎವರೆಸ್ಟ್ ಶಿಖರ ಹತ್ತಿಳಿದಿರುವ ಇವರು ಜಗತ್ತಿನ ಮೂರನೇ ಅತಿ ಎತ್ತರದ ಶಿಖರ ಅಲಸ್ಕಾದ ಮೌಂಟ್ ದೆನಲಿ ಹತ್ತಲು ಉತ್ಸುಕರಾಗಿದ್ದಾರೆ.
ಐದು ವರ್ಷದ ಗುರಿ: ಈ ಕುರಿತು ಮಾತನಾಡಿರುವ ಖಾನ್, ಕಳೆದ ವರ್ಷ ಮೂವರು ಅಮೆರಿಕನ್ನರ ಜೊತೆಗೆ ಮೌಂಟ್ ಎವರೆಸ್ಟ್ ಶಿಖರ ಏರಿದ್ದೇನೆ. ಮುಂದಿನ ಗುರಿ ಅಲಾಸ್ಕಾ. 185 ದೇಶಗಳ ಅತ್ಯಂತ ಎತ್ತರದ ಶಿಖರಗಳನ್ನು ಹತ್ತುವ ಗುರಿ ಹೊಂದಿದ್ದು, ಐದು ವರ್ಷ ರಜೆ ತೆಗೆದುಕೊಳ್ಳುವ ಯೋಜನೆಯಲ್ಲಿದ್ದೇನೆ. ಜುಲೈನಲ್ಲಿ ರಷ್ಯಾ ಮತ್ತು ಆಗಸ್ಟ್ನಲ್ಲಿ ಜಪಾನ್ಗೆ ಹೋಗುತ್ತಿದ್ದೇವೆ. 2023ಕ್ಕೆ ವಿವಿಧ ದೇಶಗಳ 15 ಶಿಖರಗಳನ್ನು ಏರುವುದು ನನ್ನ ಕನಸು. ಐದು ವರ್ಷದ ಗುರಿ ತಲುಪಲು 2028 ರವರೆಗೆ ಸಮಯ ಬೇಕು. ಇದಕ್ಕಾಗಿ 2.50 ಕೋಟಿ ಖರ್ಚಾಗಲಿದೆ. ವಿಮಾನ ಟಿಕೆಟ್, ಬೋರ್ಡಿಂಗ್ ವೆಚ್ಚಗಳು ದುಬಾರಿಯಾಗಿದ್ದು, ಇದಕ್ಕಾಗಿ ಪ್ರಯೋಜನರ ಹುಡುಕಾಟದಲ್ಲಿದ್ದೇನೆ. ಕಳೆದೆರಡು ಪ್ರಯಾಣದ ಖರ್ಚಿನಿಂದಾಗಿ ಸಾಕಷ್ಟು ಸಾಲದಲ್ಲಿದ್ದೇನೆ.
ನಾನು ಸರ್ಕಾರಿ ಉದ್ಯೋಗದಲ್ಲಿ ಇರುವುದರಿಂದ ಸುಲಭವಾಗಿ ಸಾಲ ಸಿಗುತ್ತದೆ. ನನಗೆ ಮನೆ ಕಟ್ಟುವ ಇಚ್ಛೆ ಇಲ್ಲ, ಈಗಾಗಲೇ ಪಿತ್ರಾರ್ಜಿತ ಮನೆ ಇದೆ. ಸಾಲ ಪಡೆದು ಹಿಂದಿರುಗಿಸುವಲ್ಲೂ ಕೂಡ ಉತ್ತಮ ರೆಕಾರ್ಡ್ ನಿರ್ವಹಣೆ ಮಾಡಿದ್ದೇನೆ. ನನ್ನ ಕನಸು, ಪ್ಯಾಷನ್‌ಗಾಗಿ ಸಾಲ ಮಾಡುತ್ತಿದ್ದೇನೆ. ನನ್ನ ಖರ್ಚಿನಲ್ಲಿ ನಾನು ಸಲಕರಣೆಗಳನ್ನು ಖರೀದಿಸಿದ್ದೇನೆ. ನನ್ನ ಗುರಿ ಸಾಧಿಸುವ ಸಾಮರ್ಥ್ಯವನ್ನು ನಾನು ಹೊಂದಿದ್ದೇನೆ ಎಂದರು.
ಹೆಂಡತಿಯ ಬೆಂಬಲ: ಖಾನ್ ಅವರ ಹೆಂಡತಿ ವೃತ್ತಿಯಲ್ಲಿ ಶಿಕ್ಷಕಿ. ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದಾರೆ. "ಆರು ವರ್ಷದ ಮಗಳನ್ನು ನೋಡಿಕೊಳ್ಳುವಲ್ಲಿ ಆಕೆಯ ಪಾತ್ರ ಮಹತ್ವದ್ದು. ನನ್ನ ಗುರಿ ಸಾಧನೆಗೆ ಬೆಂಬಲವಾಗಿದ್ದಾಳೆ" ಎನ್ನುತ್ತಾರೆ ಖಾನ್. "ಪ್ರತಿ ಶಿಖರದ ತುದಿ ಏರಿದಾಗಲೂ ತಿರಂಗಾ ಧ್ವಜ ಹಾರಿಸುತ್ತೇನೆ. ಮಾನಸಿಕ ತೃಪ್ತಿಯ ಜೊತೆಗೆ ಪರಿಸರ ಬದಲಾವಣೆ ಸಂದೇಶ ಹರಡುವುದು ಈ ಸಾಹಸದ ಉದ್ದೇಶ" ಎಂದು ಅವರು ತಿಳಿಸಿದರು.
ಇದನ್ನೂ ಓದಿ: ತುಳಜಾ ಭವಾನಿ ದೇವಸ್ಥಾನದಲ್ಲಿ ಭಕ್ತರಿಗೆ ಡ್ರೆಸ್ ಕೋಡ್ ಜಾರಿ