ತಿರುವನಂತಪುರಂ (ಕೇರಳ): ಹಿರಿಯ ಕಾಂಗ್ರೆಸ್ ನಾಯಕ ಹಾಗು ಕೇರಳ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಉಮ್ಮನ್ ಚಾಂಡಿ ಅವರು ಇಂದು (ಮಂಗಳವಾರ) ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಚಿನ್ಮಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ 4.25ಕ್ಕೆ ಕೊನೆಯುಸಿರೆಳೆದಿದ್ದಾರೆ.
ಮಾಜಿ ಸಿಎಂ ನಿಧನದ ಸುದ್ದಿಯನ್ನು ಪುತ್ರ ಚಾಂಡಿ ಉಮ್ಮನ್ ಅವರು ಫೇಸ್‌ಬುಕ್ ಪೋಸ್ಟ್ ಮೂಲಕ "ಅಪ್ಪಾ ಮೃತಪಟ್ಟರು" ಎಂದು ಬರೆದು ತಿಳಿಸಿದ್ದಾರೆ. ಈ ವರ್ಷಾರಂಭದಲ್ಲಿ ನ್ಯೂಮೋನಿಯಾ ಬಾಧಿಸಿದ ಹಿನ್ನೆಲೆಯಲ್ಲಿ ಚಾಂಡಿ ಅವರನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿತ್ತು.
ಉಮ್ಮನ್ ಚಾಂಡಿ ಕುರಿತು.. : ಉಮ್ಮನ್ ಚಾಂಡಿ ಅಕ್ಟೋಬರ್ 31, 1943ರಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯ ಕುಮಾರಕಟ್ ಎಂಬಲ್ಲಿ ಜನಿಸಿದರು. ಚಾಂಡಿ ಮತ್ತು ಬೇಬಿ ಚಾಂಡಿ ದಂಪತಿಯ ಪುತ್ರ. ಪುದುಪಲ್ಲಿಯ ಸೇಂಟ್ ಜಾರ್ಜ್ ಹೈಸ್ಕೂಲ್, ಕೊಟ್ಟಾಯಂ ಸಿಎಂಎಸ್ ಕಾಲೇಜಿನಲ್ಲಿ ಪಿಯು, ಚಂಗನಾಶ್ಶೇರಿ ಎಸ್.ಬಿ.ಕಾಲೇಜಿನಲ್ಲಿ ಬಿಎ ಮತ್ತು ಎರ್ನಾಕುಲಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.
ರಾಜಕೀಯ ಜೀವನ : ಯೌವನದಿಂದಲೂ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಚಾಂಡಿ, ವಿದ್ಯಾರ್ಥಿ ಒಕ್ಕೂಟದ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು. 1967ರಲ್ಲಿ ಕೇರಳ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷರಾದರು. 1969ರಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 1970ರಲ್ಲಿ ಪುದುಪಲ್ಲಿಯಿಂದ ಚುನಾವಣೆಗೆ ಸ್ಪರ್ಧಿಸಿ ತಮ್ಮ 27ನೇ ವಯಸ್ಸಿಗೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರದಲ್ಲಿ 1970ರಿಂದ 2021ರವರೆಗೂ ಪುದುಪಲ್ಲಿ ಕ್ಷೇತ್ರವೊಂದರಿಂದಲೇ ಸತತವಾಗಿ 12 ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ನಾಲ್ಕು ಬಾರಿ ಸಚಿವರಾಗಿದ್ದರು.
ಸಿಎಂಗಳಾದ ಕರುಣಾಕರನ್ (1977) ಮತ್ತು ಎ.ಕೆ.ಆ್ಯಂಟನಿ ಕ್ಯಾಬಿನೆಟ್‌ಗಳಲ್ಲಿ (1977-1978) ಕಾರ್ಮಿಕ ಇಲಾಖೆ ಉಸ್ತುವಾರಿ ವಹಿಸಿದ್ದರು. ಎರಡನೇ ಬಾರಿಗೆ ಕರುಣಾಕರನ್ ಸಂಪುಟದಲ್ಲಿ (1981-1982) ಗೃಹ ಸಚಿವರಾಗಿ ಮತ್ತು ನಾಲ್ಕನೇ ಬಾರಿಗೆ ಕರುಣಾಕರನ್ ಸಂಪುಟದಲ್ಲಿ ಹಣಕಾಸು ಸಚಿವರಾಗಿಯೂ ಕೆಲಸ ಮಾಡಿದ್ದರು. 2004-2006ರಲ್ಲಿ ಮೊದಲ ಬಾರಿಗೆ ಸಿಎಂ ಸ್ಥಾನ ಅಲಂಕರಿಸಿಕೊಂಡ ಚಾಂಡಿ 2011-2016ರ ಅವಧಿಯಲ್ಲಿ ಎರಡನೇ ಬಾರಿಗೆ ಸಿಎಂ ಆಗಿ ಆಯ್ಕೆಯಾಗಿದ್ದರು.
ಸಿಎಂ ಪಿಣರಾಯಿ ವಿಜಯನ್ ಸಂತಾಪ: ಉಮ್ಮನ್ ಚಾಂಡಿ ನಿಧನಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. "ನಾವು ಒಂದೇ ವರ್ಷ ವಿಧಾನಸಭೆಗೆ ಆಯ್ಕೆಯಾಗಿದ್ದೆವು. ವಿದ್ಯಾರ್ಥಿ ದಿಸೆಯಿಂದಲೇ ರಾಜಕೀಯ ಕ್ಷೇತ್ರಕ್ಕೆ ಬಂದೆವು. ಚಾಂಡಿ ಅವರನ್ನು ಬೀಳ್ಕೊಡುವುದು ಅತ್ಯಂತ ಕಷ್ಟಕರ. ಅವರೊಬ್ಬ ಸಮರ್ಥ ಆಡಳಿತಗಾರ ಮತ್ತು ಜನಜೀವನದಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದ ವ್ಯಕ್ತಿ" ಎಂದು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂತಾಪ: ರಾಜಕೀಯ ಮುತ್ಸದ್ಧಿ ಉಮ್ಮನ್ ಚಾಂಡಿ ನಿಧನದ ಸುದ್ದಿ ತಿಳಿದು ಆಘಾತವಾಯಿತು ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಚಾಂಡಿಯವರು ಕೇರಳ ರಾಜ್ಯವನ್ನು ಮಾನವ ಅಭಿವೃದ್ಧಿಯ ಸೂಚ್ಯಂಕಗಳಲ್ಲಿ ಉನ್ನತ ಸ್ಥಾನದಲ್ಲಿರಿಸಲು ಕಾರಣರಾದ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯಪಾಲರಾಗಿ, ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ, ಸಿಎಂ ಆಗಿ ನಿರಂತರವಾಗಿ ಸಂವಿಧಾನದ ಆಶಯಗಳು, ಮೌಲ್ಯಗಳ ರಕ್ಷಣೆಗೆ ಶ್ರಮಿಸಿದ್ದರು ಎಂದು ಸ್ಮರಿಸಿದ್ದಾರೆ.
ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಡ್ರೋನ್ ಖರೀದಿ.. ಚೀನಾ, ಪಾಕ್ ಗಡಿ ನಿರಂತರ ಕಣ್ಗಾವಲು