ಕಣ್ಣೂರು (ಕೇರಳ): ನಿಷ್ಠೆಗೆ ಮತ್ತೊಂದು ಹೆಸರೇ ಶ್ವಾನ. ಅದರ ನಿಯತ್ತು ಹಾಗೂ ಕಾಳಜಿಗೆ ಮತ್ತೊಂದು ತಾಜಾ ನಿದರ್ಶನ ಇಲ್ಲಿದೆ. ತನ್ನ ಮೃತ ಮಾಲೀಕನಿಗಾಗಿ ಒಂದಲ್ಲ, ಎರಡಲ್ಲ ಕಳೆದ ನಾಲ್ಕು ತಿಂಗಳಿಂದ ಆಸ್ಪತ್ರೆಯ ಶವಾಗಾರದ ಮುಂದೆ ಸಾಕು ನಾಯಿ ಕಾಯುತ್ತಿದೆ. ತನ್ನ ಮಾಲೀಕ ಇನ್ನಿಲ್ಲ.. ಆತ ಮರಳಿ ಬಾರದ ಲೋಕಕ್ಕೆ ಹೋಗಿದ್ದಾನೆ ಎಂದು ಅರಿಯದ ಈ ಮೂಖಜೀವಿಯ ಕಥೆ ಎಂತಹವರಿಗೂ ಮನಕಲಕುವಂತಿದೆ.
ಹೌದು, ಕೇರಳದ ಕಣ್ಣೂರು ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಕಳೆದ ನಾಲ್ಕು ತಿಂಗಳಿಂದಲೂ ಸಾಕು ನಾಯಿಯೊಂದು ತನ್ನ ಮಾಲೀಕನಿಗಾಗಿ ಕಾಯುತ್ತಿದೆ. ಈ ಹೃದಯಸ್ಪರ್ಶಿ ದೃಶ್ಯವನ್ನು ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ನಿತ್ಯ ಗಮನಿಸುತ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ವಿಕಾಸ್ ಕುಮಾರ್ ಮಾತನಾಡಿ, ''ನಾಲ್ಕು ತಿಂಗಳ ಹಿಂದೆ ರೋಗಿಯೊಬ್ಬರು ಆಸ್ಪತ್ರೆಗೆ ಬಂದಿದ್ದರು. ಆತನ ಜೊತೆಗೆ ನಾಯಿಯೂ ಬಂದಿತ್ತು. ರೋಗಿಯ ಮೃತಪಟ್ಟ ನಂತರ ಶವಾಗಾರಕ್ಕೆ ಮೃತದೇಹ ರವಾನಿಸಲಾಗಿತ್ತು. ನಾಯಿಯು ಮಾಲೀಕರನ್ನು ಶವಾಗಾರಕ್ಕೆ ಕರೆದೊಯ್ಯುವುದನ್ನು ಗಮನಿಸಿದೆ. ಇದರಿಂದ ತನ್ನ ಮಾಲೀಕ ಇನ್ನೂ ಇಲ್ಲಿದ್ದಾನೆ ಎಂದು ಅದು ಕಾಯುತ್ತಿದೆ'' ಎಂದು ಹೇಳಿದರು.
ಇದನ್ನೂ ಓದಿ: ಗಂಡು ಶ್ವಾನಕ್ಕೆ ಸೂಕ್ತ 'ವಧು' ಹುಡುಕಿ ಸಂಪ್ರದಾಯದಂತೆ ಮದುವೆ ಮಾಡಿಸಿದ ಕುಟುಂಬ
ಶ್ವಾನವು ಈ ಸ್ಥಳವನ್ನು ಬಿಟ್ಟು ಹೋಗುತ್ತಿಲ್ಲ. ಕಳೆದ ನಾಲ್ಕು ತಿಂಗಳಿನಿಂದಲೂ ಅದು ಇಲ್ಲಿಯೇ ಇದೆ ಎಂದ ಅವರು, ''ನಾಯಿಗಳು ಮತ್ತು ಮನುಷ್ಯರ ನಡುವಿನ ಸಂಬಂಧವು ಪ್ರಾಚೀನ ಕಾಲದಿಂದಲೂ ಇದೆ. ಆದರೆ, ಕುಟುಂಬ ಸಂಬಂಧಗಳು ಮುರಿದುಹೋಗುವ ಇಂತಹ ದಿನಮಾನದಲ್ಲಿ ಸಾಕು ನಾಯಿಯೊಂದು ಶವಾಗಾರದ ಮುಂದೆ ತನ್ನ ಯಜಮಾನನಿಗಾಗಿ ಕಾಯುತ್ತದೆ. ನಿಷ್ಠಾವಂತ ಶ್ವಾನ ಇಲ್ಲಿಯೇ ವಾಸಿಸುತ್ತಿದೆ. ಅದರ ನಡವಳಿಕೆಯೂ ತುಂಬಾ ಚೆನ್ನಾಗಿದೆ'' ಎಂದು ತಿಳಿಸಿದರು.
ನಾಯಿಗಳು ನಿಯತ್ತು ಮತ್ತು ನಿಷ್ಠೆಗೆ ಹೆಸರುವಾಸಿಯಾಗಿವೆ. ಇದರಿಂದ ಮಾಲೀಕರಿಗೆ ಆಪ್ತವಾಗುತ್ತವೆ. ಬಲವಾದ ವಾಸನೆಯ ಗ್ರಹಿಕಾ ಶಕ್ತಿಯನ್ನು ಹೊಂದಿವೆ. ತಮ್ಮ ಮಾಲೀಕರ ವಿಶಿಷ್ಟ ವಾಸನೆಯನ್ನು ಅವು ಪಡೆದುಕೊಂಡು ಮಾನವನೊಂದಿಗೆ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತವೆ. ಜಪಾನ್ನ ಟೋಕಿಯೊದ ಶಿಬುಯಾ ನಿಲ್ದಾಣದ ಹೊರಗೆ ತನ್ನ ಯಜಮಾನನಿಗಾಗಿ 'ಹಚಿಕೋ' ಎಂಬ ಶ್ವಾನ ಕಾಯುತ್ತಿದ್ದ ಕಥೆ ಜಗತ್ತಿನ ಗಮನ ಸೆಳೆದಿತ್ತು.
ಇದೇ ಕಥೆಯನ್ನೂ ಕಣ್ಣೂರಿನ ಈ ಘಟನೆ ಹೋಲುತ್ತದೆ. ಟೋಕಿಯೊದ ಶಿಬುಯಾ ನಿಲ್ದಾಣದ ಹೊರಗೆ ತನ್ನ ಯಜಮಾನ ಮೃತಪಟ್ಟ ನಂತರವೂ ನಾಯಿ ಹಚಿಕೋ, ಆತನಿಗಾಗಿ ಕಾಯುತ್ತಿತ್ತು. ನಿಲ್ದಾಣದ ಹೊರಗೆ ನಿಷ್ಠಾವಂತ ನಾಯಿ ಪ್ರತಿಮೆ ನಿರ್ಮಿಸಲಾಗಿದೆ. ಇದು ಜಪಾನ್ನಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳವಾಗಿದ್ದು, ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಇದನ್ನೂ ಓದಿ: ಒಡೆಯನ ಬರುವಿಕೆಗೆ ಕಾಯ್ದು ಅಸುನೀಗಿದ ಶ್ವಾನ.. ಶಿರಸಿಯಲ್ಲೊಂದು ಮನಕಲುಕುವ ಘಟನೆ