ಎರ್ನಾಕುಲಂ (ಕೇರಳ): 2017ರಲ್ಲಿ ನಡೆದ ದಕ್ಷಿಣ ಭಾರತದ ಜನಪ್ರಿಯ ನಟಿಯೊಬ್ಬರ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಮಲಯಾಳಂನ ಸ್ಟಾರ್ ನಟ ದಿಲೀಪ್ ಅವರ ನಿವಾಸ ಹಾಗೂ ಗ್ರ್ಯಾಂಡ್ ಪ್ರೊಡಕ್ಷನ್ ಕಂಪನಿಯ ಕಚೇರಿ ಮೇಲೆ ಕೇರಳ ಅಪರಾಧ ವಿಭಾಗದ ತಂಡ ಇಂದು ಏಕಕಾಲದಲ್ಲಿ ದಾಳಿ ನಡೆಸಿದೆ. ದಿಲೀಪ್ ಅವರ ಸಹೋದರ ಅನೂಪ್ ಅವರ ಮನೆಯ ಮೇಲೂ ದಾಳಿ ನಡೆಸಲಾಗಿದೆ.
ದೀರ್ಘಕಾಲದಿಂದ ದಿಲೀಪ್ ಅವರ ಆಪ್ತರಾಗಿದ್ದ ನಿರ್ದೇಶಕ ಬಾಲಚಂದ್ರ ಕುಮಾರ್ ಮೆನನ್ ಅವರೇ ಕೆಲ ವಿಚಾರಗಳನ್ನು ಬಹಿರಂಗಪಡಿಸಿದ್ದು, ರಹಸ್ಯ ಹೇಳಿಕೆಗಳ ಆಧಾರದ ಮೇಲೆ ಕೇರಳ ಪೊಲೀಸರು ನಟ ದಿಲೀಪ್, ಅವರ ಸಹೋದರ ಅನೂಪ್, ಅವರ ಅಳಿಯ ಸೂರಜ್ ಸೇರಿದಂತೆ ಕೆಲ ಕುಟುಂಬ ಸದಸ್ಯರ ವಿರುದ್ಧ ಜಾಮೀನು ರಹಿತ ಹೊಸ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಎರ್ನಾಕುಲಂನಲ್ಲಿ ಎಸ್‌ಪಿ ಮೋಹನ ಚಂದ್ರನ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮನೆಯ ಗೇಟ್‌ಗಳಿಗೆ ಬೀಗ ಹಾಕಿದ್ದರಿಂದ ಗೇಟ್ ಹಾಗೂ ಕಾಂಪೌಂಡ್ಗಳನ್ನು ಏರಿ ಅಧಿಕಾರಿಗಳು ಒಳಗೆ ಪ್ರವೇಶಿಸಬೇಕಾಯಿತು. ಬಳಿಕ ದಿಲೀಪ್ ಅವರ ಸಹೋದರಿ ಬಂದು ಗೇಟ್ ಓಪನ್ ಮಾಡಿದ್ದಾರೆ. ಇನ್ನು ದಿಲೀಪ್ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ನಾಳೆ ಇದರ ವಿಚಾರಣೆಯನ್ನು ನ್ಯಾಯಾಲಯ ನಡೆಸಲಿದೆ.
ಇದನ್ನೂ ಓದಿ: ನಟ ದಿಲೀಪ್ ವಿರುದ್ಧ ಕೇರಳ ಪೊಲೀಸರಿಂದ ಜಾಮೀನು ರಹಿತ ಪ್ರಕರಣ ದಾಖಲು!
ಫೆಬ್ರವರಿ 17, 2017 ರ ರಾತ್ರಿ ಚಿತ್ರೀಕರಣ ಮುಗಿಸಿ ಮನೆಗೆ ತೆರಳುತ್ತಿದ್ದ ನಟಿಯನ್ನು ದಿಲೀಪ್ ಅವರ ಗ್ಯಾಂಗ್ಅಪಹರಿಸಿ ಕಾರಿನೊಳಗೆ ಎರಡು ಗಂಟೆಗಳ ಲೈಂಗಿಕ ಕಿರುಕುಳ ನೀಡಿತ್ತು. ಅಷ್ಟೇ ಅಲ್ಲ, ಕೃತ್ಯದ ದೃಶ್ಯ ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ದಿಲೀಪ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದರು.