ತಿರುವನಂತಪುರ : ಕೇರಳ ರಾಜ್ಯವು ಶುಕ್ರವಾರ 5,35,074 ಜನರಿಗೆ ಕೊರೊನಾ ವ್ಯಾಕ್ಸಿನ್ ನೀಡುವ ಮೂಲಕ ಒಂದೇ ದಿನದಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ವ್ಯಾಕ್ಸಿನ್ ಪಡೆದ 5.3 ಲಕ್ಷ ಜನರಲ್ಲಿ 4,64,849 ಮಂದಿಗೆ ಮೊದಲ ಡೋಸ್ ನೀಡಲಾಗಿದ್ದರೆ, ಉಳಿದ 70,225 ಜನರಿಗೆ 2ನೇ ಡೋಸ್ ನೀಡಲಾಗಿದೆ.
ಈ ಹಿಂದೆ ಒಂದೇ ದಿನ ಸುಮಾರು 5.15 ಲಕ್ಷ ಜನರಿಗೆ ಲಸಿಕೆ ನೀಡುವ ಮೂಲಕ ಕೇರಳ ರೆಕಾರ್ಡ್ ಮಾಡಿತ್ತು. ಇದೀಗ 5.3 ಲಕ್ಷ ಮಂದಿಗೆ ವ್ಯಾಕ್ಸಿನ್ ನೀಡುವ ಮೂಲಕ ಆ ರೆಕಾರ್ಡ್ ಬ್ರೇಕ್ ಮಾಡಿದೆ.
ಈ ಮೆಗಾ ವ್ಯಾಕ್ಸಿನೇಷನ್ ಕುರಿತು ಪ್ರತಿಕ್ರಿಯಿಸಿದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಲಸಿಕಾ ಅಭಿಯಾನಕ್ಕೆ ಇನ್ನೂ ಹೆಚ್ಚಿನ ಲಸಿಕೆಗಳ ಅಗತ್ಯವಿದೆ ಎಂದು ಹೇಳಿದರು. ಲಸಿಕಾ ಅಭಿಯಾನದ ಮೊದಲ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ಹಾಕುವ ಉದ್ದೇಶ ಹೊಂದಲಾಗಿದೆ. ಆಗಸ್ಟ್ 15ರೊಳಗೆ ಹಾಸಿಗೆ ಹಿಡಿದಿರುವ 18 ವರ್ಷ ಮೇಲ್ಪಟ್ಟ ಎಲ್ಲಾ ರೋಗಿಗಳಿಗೆ ವ್ಯಾಕ್ಸಿನ್ ಹಾಕುವ ಗುರಿ ಇದೆ.
ಶುಕ್ರವಾರ 1.2 ಲಕ್ಷ ಹಿರಿಯ ನಾಗರಿಕರಿಗೆ ವ್ಯಾಕ್ಸಿನ್ ನೀಡಲಾಯಿತು. ರಾಜ್ಯದಲ್ಲಿ ಲಸಿಕೆ ಅಭಿಯಾನ ಆರಂಭವಾದ ನಂತರ ಸುಮಾರು 5.04 ಲಕ್ಷ ಹಿರಿಯ ನಾಗರಿಕರಿಗೆ ಮೊದಲ ಡೋಸ್ ಪೂರೈಸುವಲ್ಲಿ ಸರ್ಕಾರ ಸಫಲವಾಗಿದೆ.
ಕೇರಳವು ಶುಕ್ರವಾರ ಒಟ್ಟು 4,02,400 ಡೋಸ್‌ಗಳನ್ನು ಸ್ವೀಕರಿಸಿದೆ. ಅದರಲ್ಲಿ 3,02,400 ಡೋಸ್‌ಗಳು ಕೋವಿಶೀಲ್ಡ್ ಮತ್ತು 1 ಲಕ್ಷ ಡೋಸ್‌ಗಳು ಕೋವ್ಯಾಕ್ಸಿನ್ ಲಸಿಕೆಗಳಾಗಿವೆ. ಜಿಲ್ಲಾವಾರು ಮಾಹಿತಿ ಪ್ರಕಾರ ತಿರುವನಂತಪುರಂ 1,02,390 ಡೋಸ್, ಎರ್ನಾಕುಲಂ 1,19,050, ಕೋಯಿಕ್ಕೋಡ್ 80,960 ಕೋವಿಶೀಲ್ಡ್ ವ್ಯಾಕ್ಸಿನ್ ಸ್ವೀಕರಿಸಿವೆ.
ತಿರುವನಂತಪುರಂ ಒಂದು ಲಕ್ಷ COVAXIN ಸಹ ಸ್ವೀಕರಿಸಿದೆ. ಕೇರಳದಲ್ಲಿ ಒಟ್ಟು 1804 ವ್ಯಾಕ್ಸಿನೇಷನ್ ಸೆಂಟರ್ಗಳಿವೆ. ಇವುಗಳಲ್ಲಿ 1465 ಸರ್ಕಾರಿ ಹಾಗೂ 339 ಖಾಸಗಿ ಸೆಂಟರ್ಗಳು ಸೇರಿವೆ.
ಇದನ್ನೂ ಓದಿ:23 ಐಟಿಬಿಪಿ ಸಿಬ್ಬಂದಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಶೌರ್ಯ ಪದಕ ಪ್ರದಾನ