ಎರ್ನಾಕುಲಂ(ಕೇರಳ): ಕೊಚ್ಚಿಯ ಮಾಲ್‌ನಲ್ಲಿ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ
ಎರ್ನಾಕುಲಂನ ಕಲಾಮಶೇರಿಯಿಂದ ತಮ್ಮ ವಕೀಲರೊಂದಿಗೆ ಶರಣಾಗಲು ತೆರಳುತ್ತಿದ್ದಾಗ ಪೊಲೀಸ್ ತಂಡವು ಮಲಪ್ಪುರಂ ಜಿಲ್ಲೆಯ ಪೆರಿಂಟಲ್ಮಣ್ಣ ಮೂಲದ ರಾಮ್‌ಶಾದ್ ಮತ್ತು ಅಧಿಲ್ ಎಂಬ ಇಬ್ಬರು ಯುವಕರನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 354 ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಗಳಿಂದ ಹೇಳಿಕೆ ಪಡೆದಿರುವ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಈಗಾಗಲೇ ಇವರಿಬ್ಬರು ಹೈಕೋರ್ಟ್ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದ ಕಾರಣ ಶರಣಾಗಲು ನಿರ್ಧರಿಸಿದರು ಎನ್ನಲಾಗ್ತಿದೆ.
ಯುವ ನಟಿ ಗುರುವಾರ ತಮ್ಮ ಕುಟುಂಬದೊಂದಿಗೆ ಕೊಚ್ಚಿಯ ಜನಪ್ರಿಯ ಶಾಪಿಂಗ್ ಮಾಲ್‌ಗೆ ಹೋದಾಗ ಕಿರುಕುಳ ನೀಡಿರುವ ಘಟನೆ ನಡೆದಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತನ್ನ ಅಳಲು ತೋಡಿಕೊಂಡಿದ್ದ ನಟಿ, ಇಬ್ಬರು ಯುವಕರು ನನ್ನನ್ನು ಹಿಂಬಾಲಿಸಿದರು. ದೇಹದ ಖಾಸಗಿ ಭಾಗಗಳನ್ನು ಮುಟ್ಟಿದರು ಮತ್ತು ನನ್ನನ್ನು ಹಿಡಿದರು. ಈ ಅನಿರೀಕ್ಷಿತ ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೆ. ನನಗೆ ತಕ್ಷಣ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ನಾನು ಅವರ ಬಳಿಗೆ ಹೋಗಲು ಪ್ರಯತ್ನಿಸಿದಾಗ, ಇಬ್ಬರು ನನ್ನನ್ನು ನೋಡದವಂತೆ ವರ್ತಿಸಿದರು. ನಂತರ ನಾನು ನಗದು ಕೌಂಟರ್‌ನಲ್ಲಿದ್ದಾಗ, ಅವರು ಬಂದು ನನ್ನೊಂದಿಗೆ ಮಾತನಾಡಲು ಪ್ರಯತ್ನಿಸಿದರು ಎಂದು ನಟಿ ಹೇಳಿಕೊಂಡಿದ್ದರು.
ಓದಿ ಕೊಚ್ಚಿ ಶಾಪಿಂಗ್ ಮಾಲ್‌ನಲ್ಲಿ ನಡೆದ ‘ಆ ಕರಾಳ ಘಟನೆ’ ಬಗ್ಗೆ ಹಂಚಿಕೊಂಡ ಕೇರಳ ನಟಿ
ಘಟನೆ ಬಗ್ಗೆ ಸ್ವಯಂ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಅಪರಾಧಿಗಳನ್ನು ಪತ್ತೆ ಹಚ್ಚಲು ಶಾಪಿಂಗ್ ಮಾಲ್, ಮೆಟ್ರೋ ನಿಲ್ದಾಣ ಮತ್ತು ದಕ್ಷಿಣ ರೈಲ್ವೆ ನಿಲ್ದಾಣದಿಂದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದರು. ಇದರ ಬೆನ್ನಲ್ಲೇ ಶನಿವಾರ ಮಧ್ಯಾಹ್ನ ಆರೋಪಿಗಳ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಇದರೊಂದಿಗೆ ಆರೋಪಿಗಳಿಬ್ಬರು ತಾವು ನಟಿಗೆ ಕಿರುಕುಳ ನೀಡಿಲ್ಲ ಎಂದು ಮಾಧ್ಯಮಗಳ ಮೂಲಕ ವಿವರಣೆ ನೀಡಲು ಪ್ರಯತ್ನಿಸಿದರು. ಆದರೆ ಬೇರೆ ದಾರಿ ಕಾಣದೆ ಶರಣಾಗಲು ನಿರ್ಧರಿಸಿದ್ದರು.