ನವದೆಹಲಿ: ನಾನು ಜನತೆಯ ಅಚ್ಚುಮೆಚ್ಚಿನ ಮಗ. ನನ್ನ ಮೇಲೆ ಜನರು ತೋರುತ್ತಿರುವ ಪ್ರೀತಿಯನ್ನು ಸಹಿಸದೆ ಬಿಜೆಪಿ ನನಗೆ ತೊಂದರೆ ನೀಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ದೆಹಲಿ ಮುನ್ಸಿಪಲ್ ಚುನಾವಣೆ (ಎಂಸಿಡಿ) ಮತ್ತು ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಎದುರು ನೇರ ಹಣಾಹಣಿಗೆ ಇಳಿದಿರುವ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ, ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಮತ್ತು ಅತ್ಯಂತ ಭ್ರಷ್ಟ ಪಕ್ಷ ಎಂದು ಬಿಜೆಪಿ ನಾಯಕರು ಹೀಗಳೆದಿದ್ದಾರೆ.
ಪಂಜಾಬ್ ಚುನಾವಣೆಗೆ ಮುನ್ನ ಅರವಿಂದ್ ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಗೃಹ ಸಚಿವ ಅಮಿತ್ ಶಾ ಕೂಡ ಈ ಸಂಬಂಧ ತನಿಖೆಗೆ ಆಗ್ರಹಿಸಿದ್ದರು. ಆದರೆ ಏನಾಯಿತು ಈಗ? ಗುಜರಾತ್ ಚುನಾವಣೆ ಮತ್ತು ಎಂಸಿಡಿ ಚುನಾವಣೆಗೆ ಮುನ್ನ ಅವರು ಕೇಜ್ರಿವಾಲ್ ಭ್ರಷ್ಟ ಎನ್ನುತ್ತಿದ್ದಾರೆ. ಕೇಜ್ರಿವಾಲ್ ಭ್ರಷ್ಟ ಅಥವಾ ಭಯೋತ್ಪಾದಕ ಎಂದರೆ ಬಂಧಿಸಬೇಕು ಅಲ್ಲವೇ ಎಂದು ಟ್ವೀಟ್ ಮೂಲಕ ದೆಹಲಿ ಸಿಎಂ ಪ್ರಶ್ನಿಸಿದ್ದಾರೆ.
ಕೇಜ್ರಿವಾಲ್ ಭಯೋತ್ಪಾದಕನೂ ಅಲ್ಲ, ಭ್ರಷ್ಟನೂ ಅಲ್ಲ. ಅವನು ಜನರ ಪ್ರೀತಿಗೆ ಪಾತ್ರನಾದವನು. ಅದು ಬಿಜೆಪಿಗೆ ದೊಡ್ಡ ಸಮಸ್ಯೆ ಆಗುತ್ತಿದೆ ಎಂದಿದ್ದಾರೆ ದೆಹಲಿ ಸಿಎಂ.
ದೆಹಲಿ ಮುನ್ಸಿಪಲ್ ಚುನಾವಣೆ ಮುಂದಿನ ತಿಂಗಳು ಅಂದರೆ, ಡಿಸೆಂಬರ್ 4 ರಂದು ನಡೆಯಲಿದೆ. 7ರಂದು ಮತ ಏಣಿಕೆ ನಡೆಯಲಿದೆ.
2007ರಿಂದ ದೆಹಲಿಯ ಮುನ್ಸಿಪಲ್ ಅಧಿಕಾರವನ್ನು ಬಿಜೆಪಿ ನಡೆಸುತ್ತಿದ್ದು, ಕಾಂಗ್ರೆಸ್ ಮತ್ತು ಎಎಪಿ ಈಗ ಎದುರಾಳಿಯಾಗಿವೆ. 2017ರಲ್ಲಿ 270 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 181 ಸ್ಥಾನ ಪಡೆದಿದ್ದು, ಇಬ್ಬರು ಅಭ್ಯರ್ಥಿಗಳ ಸಾವಿನಿಂದಾಗಿ ಎರಡು ಸ್ಥಾನಗಳಿಗೆ ಚುನಾವಣೆ ನಡೆದಿರಲಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನ ಹಾಗೂ ಕಾಂಗ್ರೆಸ್ 27 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. ಈ ವರ್ಷದ ಆರಂಭದಲ್ಲಿ ಕೇಂದ್ರ ದೆಹಲಿಯ ಮೂರು ಮುನ್ಸಿಪಲ್ ಕಾರ್ಪೋರೇಷನ್ ಅನ್ನು ಎಂಸಿಡಿ ಅಡಿ ತಂದು ಈ ವಾರ್ಡ್ಗಳ ಸ್ಥಾನವನ್ನು 272ರಿಂದ 250ಕ್ಕೆ ಇಳಿಸಿತ್ತು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ ಅರವಿಂದ್ ಕೇಜ್ರಿವಾಲ್