ಅಹಮದಾಬಾದ್ (ಗುಜರಾತ್): ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಇಸುದನ್ ಗಧ್ವಿ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಇಂದು ಪ್ರಕಟಿಸಿದ್ದಾರೆ.
182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಮುಂದಿನ ತಿಂಗಳು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಗೆ ಎಎಪಿ ತನ್ನ 10 ಅಭ್ಯರ್ಥಿಗಳ ಒಂಬತ್ತನೇ ಪಟ್ಟಿಯನ್ನು ನಿನ್ನೆ ಪ್ರಕಟಿಸಿದ್ದು, ಇದುವರೆಗೆ ಘೋಷಿಸಲಾದ ಅಭ್ಯರ್ಥಿಗಳ ಸಂಖ್ಯೆಯನ್ನು 118 ಕ್ಕೆ ಏರಿಕೆಯಾಗಿದೆ.
ಪ್ರಸ್ತುತ ಭಾರತೀಯ ಜನತಾ ಪಕ್ಷವು ಆಡಳಿತ ನಡೆಸುತ್ತಿರುವ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾರಾಗಬೇಕು ಎಂಬುದನ್ನು ಎಸ್‌ಎಂಎಸ್, ವಾಟ್ಸ್ಆ್ಯಪ್, ಧ್ವನಿ ಮೇಲ್ ಮತ್ತು ಇ-ಮೇಲ್ ಮೂಲಕ ತಮ್ಮ ಅಭಿಪ್ರಾಯಗಳನ್ನು ನೀಡಿ ಎಂದು ಕಳೆದ ವಾರ ಕೇಜ್ರಿವಾಲ್ ಜನರಿಗೆ ಮನವಿ ಮಾಡಿದ್ದರು. ರಾಜ್ಯದ ಜನತೆ ಪಕ್ಷಕ್ಕೆ ಸಲ್ಲಿಸುವ ಅಭಿಪ್ರಾಯದ ಆಧಾರದ ಮೇಲೆ ಈ ಅಭ್ಯರ್ಥಿಯನ್ನು ಹೆಸರಿಸಲಾಗುವುದು ಎಂದು ಹೇಳಿದ್ದರು.
ಈ ಹಿಂದೆ ಪಂಜಾಬ್ ಚುನಾವಣೆಯ ಸಮಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಾವು ಜನರನ್ನು ಕೇಳಿದ್ದೆವು, ಜನರು ಭಗವಂತ್ ಮಾನ್ ಅವರನ್ನು ಹೆಸರಿಸಿದ್ದರು. ಜನರ ಇಚ್ಛೆಯಂತೆ ನಾವು ಮಾನ್ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಇದೆ ಮಾದರಿಯಲ್ಲೇ ಗುಜರಾತ್ ವಿಧಾನಸಭೆ ಚುನಾವಣೆಯ ಮುಖ್ಯಮಂತ್ರಿ ಆಯ್ಕೆಗೆ ಜನರ ಅಭಿಪ್ರಾಯಗಳ ಆಧಾರದ ಮೇಲೆ ಪಕ್ಷದ ಮುಖ್ಯಮಂತ್ರಿ ಹೆಸರನ್ನು ಮರುದಿನ ಪ್ರಕಟಿಸಲಾಗುವುದು ಎಂದು ತಿಳಿಸಿದ್ದರು.
ಮುಖ್ಯಮಂತ್ರಿ ಅಭ್ಯರ್ಥಿ ರೇಸ್‌ನಲ್ಲಿ ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಸುದನ್ ಗಧ್ವಿ ಮತ್ತು ಪ್ರಧಾನ ಕಾರ್ಯದರ್ಶಿ ಮನೋಜ್ ಸೊರತಿಹ್ಯ ಇದ್ದರು ಎಂದು ಪಕ್ಷದ ಮೂಲಗಳು ತಿಳಿಸಿದ್ದವು. ಇದೀಗ ಇಸುದನ್ ಗಧ್ವಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ಇದನ್ನೂ ಓದಿ: ಗುಜರಾತ್ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ: ಪಶ್ಚಿಮ ಬಂಗಾಳದಲ್ಲೂ ಇದೇ ಫಲಿತಾಂಶ ಎಂದ ಶಾ!