ಪಾಟ್ನಾ: 2024ರ ಸಾರ್ವತ್ರಿಕ ಚುನಾವಣೆಗಾಗಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದ ಭಾಗವಾಗಿ ಅಷ್ಟು ದೂರದ ತೆಲಂಗಾಣದಿಂದ ಬಿಹಾರಕ್ಕೆ ತೆರಳಿದ್ದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್), ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮಾಧ್ಯಮಗೋಷ್ಟಿ ವೇಳೆ ನಡೆದ ಪ್ರಸಂಗ ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಸುಮಾರು 50 ನಿಮಿಷಗಳ ಕಾಲ ಬುಧವಾರ ಪಾಟ್ನಾದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಪ್ರತಿಪಕ್ಷಗಳ ಒಮ್ಮತದ ಪ್ರಧಾನಿ ಅಭ್ಯರ್ಥಿ ಯಾರೆಂಬ ಪ್ರಶ್ನೆಗೆ ನೇರವಾಗಿ ಉತ್ತರಿಸದ ಕೆಸಿಆರ್, ಅದನ್ನು ಒಮ್ಮತದ ನಿರ್ಣಯದ ಮೂಲಕ ನಿರ್ಧರಿಸಲಾಗುತ್ತದೆ ಎಂದರು. ಆದರೆ ಈ ಪ್ರಶ್ನೆಯಿಂದ ವಿಚಲಿತರಾದಂತೆ ಕಂಡುಬಂದ ಸಿಎಂ ನಿತೀಶ್ ಕುಮಾರ್ ಅವರು ಸ್ಥಳದಿಂದ ಎದ್ದು ಹೊರಡಲು ಮುಂದಾದರು.
ಈ ಸಂದರ್ಭದಲ್ಲಿ ದಯವಿಟ್ಟು ಕುಳಿತುಕೊಳ್ಳಿ (ಬೈಠ್ ಜಾಯಿಯೆ) ಎಂದು ಕೆಸಿಆರ್ ನಿತೀಶ್ರಿಗೆ ಮನವಿ ಮಾಡುತ್ತಲೇ ಇದ್ದರು. ನಿತೀಶ್ ಅವರೊಂದಿಗೆ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡ ಹೊರಡಲು ಎದ್ದು ನಿಂತಿದ್ದರು. ಕುಳಿತುಕೊಳ್ಳಿ ಎನ್ನುತ್ತಿದ್ದ ಕೆಸಿಆರ್ ಮನವಿಗೆ ಪ್ರತಿಕ್ರಿಯಿಸಿದ ನಿತೀಶ್, ಈಗಾಗಲೇ 50 ನಿಮಿಷಗಳವರೆಗೆ ಅವರು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಅವರಿಗೆ ಮತ್ತೇನು ಕೇಳುವುದಿದೆ.. ಎಲ್ಲವೂ ಸ್ಪಷ್ಟವಾಗಿದೆ ಎಂದರು.
ಒಂದು ಕಡೆ ಕೆಸಿಆರ್ ಬೈಠಿಯೆ (ಕುಳಿತುಕೊಳ್ಳಿ) ಎನ್ನುತ್ತಿದ್ದರೆ, ಮತ್ತೊಂದೆಡೆ ನಿತೀಶ್ ಚಲೀಯೆ (ನಡೆಯಿರಿ ಹೋಗೋಣ) ಎನ್ನುತ್ತಿದ್ದರು. ಪ್ರಧಾನಿ ಅಭ್ಯರ್ಥಿಯ ಬಗ್ಗೆ ಪ್ರತಿಪಕ್ಷಗಳಲ್ಲಿ ಒಗ್ಗಟ್ಟಿಲ್ಲ ಎಂದು ಮಾಧ್ಯಮಗೋಷ್ಟಿಯಲ್ಲಿ ನಡೆದ ಈ ಪ್ರಹಸನವನ್ನು ಕೆಲವರು ವ್ಯಾಖ್ಯಾನಿಸುತ್ತಿದ್ದಾರೆ.
ಆದರೆ, ಈ ಪ್ರಹಸನವನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ ಎಂದ ನಿತೀಶ್ ಕುಮಾರ್ ಅವರಿಗೆ ಆಪ್ತರಾದವರು ಹೇಳುತ್ತಿದ್ದು, ವರದಿಗಾರರು ಕೇಳಿದ ಪ್ರಶ್ನೆಗಳನ್ನೇ ಮತ್ತೆ ಮತ್ತೆ ಕೇಳಲಾರಂಭಿಸಿದ್ದರಿಂದ ಅವರು ಎದ್ದು ಹೊರಡಲು ಮುಂದಾದರು ಎನ್ನಲಾಗ್ತಿದೆ. ಈ ಮಧ್ಯೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಬಿಜೆಪಿ, ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ವ್ಯಂಗ್ಯ ಮಾಡಿದೆ.
ಕೆಸಿಆರ್ ಈ ರೀತಿ ಅವಮಾನ ಮಾಡಿಸಿಕೊಳ್ಳಲು ಪಾಟ್ನಾಗೆ ಹೋಗಿದ್ದರಾ? ಮಾಧ್ಯಮಗೋಷ್ಟಿಯಲ್ಲಿ ತಮ್ಮ ಮಾತನ್ನು ಪೂರ್ಣಗೊಳಿಸುವ ಕನಿಷ್ಠ ಸೌಜನ್ಯವನ್ನು ಕೂಡ ನಿತೀಶ್ ಕುಮಾರ್ ಅವರಿಗೆ ನೀಡಲಿಲ್ಲ. ತಮ್ಮ ಮಾತನ್ನು ಪೂರ್ಣಗೊಳಿಸಲು ಬಿಡಿ ಎಂಬ ಕೆಸಿಆರ್ ಮನವಿಯನ್ನು ನಿತೀಶ್ ತಿರಸ್ಕರಿಸಿದರು. ಆದರೆ ಅವರು ಎಷ್ಟಾದರೂ ನಿತೀಶ್ ಕುಮಾರ್. ಸ್ವಾಭಿಮಾನಿ ನಿತೀಶ್ ಕುಮಾರ್. ಕೆಸಿಆರ್ ಇದನ್ನು ಬೇಕೆಂದು ಕೇಳಿದ್ದರಾ... ಎಂದು ಬಿಜೆಪಿ ಟ್ವೀಟ್ ಮಾಡಿದೆ.