ನವದೆಹಲಿ: 2024ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್, ವಿವಿಧ ರಾಜ್ಯಗಳ ಪ್ರವಾಸ ಕೈಗೊಂಡಿದ್ದು, ಇಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರನ್ನ ಭೇಟಿ ಮಾಡಿದರು. ಇದರ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್ ಜೊತೆ ಕೆಲಹೊತ್ತು ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಕಳೆದ ಕೆಲ ತಿಂಗಳ ಹಿಂದೆ ನಡೆದ ಉತ್ತರ ಪ್ರದೇಶ ಚುನಾವಣೆ ಹಾಗೂ ವಿವಿಧ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ತೃತೀಯ ರಂಗ ರಚನೆ ಮಾಡುವ ಬಗ್ಗೆ ಅಖಿಲೇಶ್ ಯಾದವ್ ಅವರೊಂದಿಗೆ ಮಾತುಕತೆ ನಡೆಸಿದ್ದಾಗಿ ವರದಿಯಾಗಿದೆ. ಇದರ ಜೊತೆಗೆ ದೆಹಲಿ ಸಿಎಂ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಜೊತೆಗೂ ಕೆಸಿಆರ್ ಮಾತುಕತೆ ನಡೆಸಿದ್ದಾಗಿ ತಿಳಿದು ಬಂದಿದೆ.
2024ರ ಲೋಕಸಭೆ ಚುನಾವಣೆ ಹಾಗೂ ರಾಷ್ಟ್ರ ರಾಜಕಾರಣದ ಮೇಲೆ ಕಣ್ಣಿಟ್ಟಿರುವ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ನಿನ್ನೆಯಿಂದ ಮಹತ್ವದ ವಿವಿಧ ರಾಜ್ಯಗಳ ಪ್ರವಾಸ ಆರಂಭಿಸಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ ಅವರು ಪ್ರವಾಸ ಕೈಗೊಳ್ಳಲಿದ್ದು, ಪ್ರಮುಖವಾಗಿ ದೆಹಲಿ, ಚಂಡೀಗಢ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ.
ಪ್ರವಾಸದ ವೇಳೆ ವಿವಿಧ ರಾಜಕೀಯ ಮುಖಂಡರು ಹಾಗೂ ಅಲ್ಲಿನ ಮುಖ್ಯಮಂತ್ರಿಗಳ ಭೇಟಿಗೆ ಕೆಸಿಆರ್ ಮುಂದಾಗಿದ್ದು, ಆರ್ಥಿಕ ತಜ್ಞರೊಂದಿಗೂ ಸಮಾಲೋಚನೆ ನಡೆಸಲು ನಿರ್ಧರಿಸಿದ್ದಾರೆ. ಟಿಆರ್ಎಸ್ ಪಕ್ಷವನ್ನ ಕೇವಲ ತೆಲಂಗಾಣದಲ್ಲಿ ಸಿಮೀತಗೊಳಿಸುವ ಬದಲು, ದಕ್ಷಿಣದ ವಿವಿಧ ರಾಜ್ಯಗಳಿಗೂ ಕೊಂಡೊಯ್ಯುವ ನಿರ್ಧಾರ ಕೈಗೊಂಡಿದ್ದಾರೆ.
ರೈತ ಕುಟುಂಬಗಳ ಭೇಟಿ: ಕೇಂದ್ರ ಸರ್ಕಾರದ ಕೃಷಿ ಕಾನೂನು ವಿರುದ್ಧದ ಹೋರಾಟದ ವೇಳೆ ಪ್ರಾಣ ಕಳೆದುಕೊಂಡಿರುವ 600ಕ್ಕೂ ಹೆಚ್ಚು ರೈತ ಕುಟುಂಬಗಳನ್ನ ಭೇಟಿ ಮಾಡಲು ಕೆಸಿಆರ್ ನಿರ್ಧರಿಸಿದ್ದಾರೆ. ಈ ವೇಳೆ, ಪ್ರತಿ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರದ ಚೆಕ್ ನೀಡುವ ಸಾಧ್ಯತೆ ಇದೆ. ಈ ವೇಳೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್ ಸಾಥ್ ನೀಡಲಿದ್ದಾರೆ.
ಕೆಸಿಆರ್ ಪ್ರವಾಸ ವೇಳಾಪಟ್ಟಿ: ಮೇ 22ರಂದು ಚಂಡೀಗಢ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ರೈತ ಕುಟುಂಬಗಳ ಭೇಟಿ ಮಾಡಲಿದ್ದು, ಇದಾದ ಬಳಿಕ ಮೇ. 26ರಂದು ಕರ್ನಾಟಕ, ಮೇ, 27ರಂದು ರಾಲೇಗಾಂವ್ನಲ್ಲಿ ಅಣ್ಣಾ ಹಜಾರೆ ಭೇಟಿ ಮಾಡಿ ತದನಂತರ ಶಿರಡಿ ಹಾಗೂ, ಸಾಯಿ ಬಾಬಾ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಮೇ. 29 ಮತ್ತು 30ರಂದು ಬಿಹಾರ ಹಾಗೂ ಪಶ್ಚಿಮ ಬಂಗಾಳ ಪ್ರವಾಸ ಕೈಗೊಳ್ಳಲು ಕೆಸಿಆರ್ ನಿರ್ಧರಿಸಿದ್ದಾರೆ.
ದೆಹಲಿ ಬಳಿಕ ಕರ್ನಾಟಕ ಪ್ರವಾಸ ಕೈಗೊಳ್ಳಲಿರುವ ಕೆಸಿಆರ್ ಜನತಾ ದಳ(ಜಾತ್ಯತೀತ) ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನ ಭೇಟಿ ಮಾಡಲಿದ್ದು, ಈ ವೇಳೆ ಕಾಂಗ್ರೆಸ್ ಹೊರತುಪಡಿಸಿ, ತೃತೀಯ ರಂಗ ರಚನೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಇದಾದ ಬಳಿಕ ಪಶ್ಚಿಮ ಬಂಗಾಳ, ಬಿಹಾರ ಭೇಟಿ ನೀಡಿ ಪ್ರಮುಖ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ.