ಹೈದರಾಬಾದ್: ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ರಾವ್ ಅವರು ತಮ್ಮ ಪಕ್ಷ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯನ್ನು ವಿಸ್ತರಿಸುವ ಭಾಗವಾಗಿ ಇಂದು 600 ವಾಹನಗಳ ಬೃಹತ್ ಬೆಂಗಾವಲು ಪಡೆಯೊಂದಿಗೆ ಮಹಾರಾಷ್ಟ್ರಕ್ಕೆ ತೆರಳಿದರು. ರಸ್ತೆ ಮಾರ್ಗವಾಗಿ ತೆರಳಿದ ಅವರ ಬೆಂಗಾವಲು ಪಡೆ 6 ಕಿ.ಮೀ.ಗೂ ಅಧಿಕವಾಗಿತ್ತು. ಸಚಿವರು, ಸಂಸದರು, ಶಾಸಕರು, ಎಂಎಲ್ಸಿಗಳು ಸೇರಿದಂತೆ ಪಕ್ಷದ ಮುಖಂಡರ ಜತೆಗೂಡಿ ಅವರು ಸೊಲ್ಲಾಪುರಕ್ಕೆ ಭೇಟಿ ನೀಡುತ್ತಿದ್ದಾರೆ.
ಬಿಆರ್‌ಎಸ್ ಮುಖ್ಯಸ್ಥರು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಟಿಎಸ್‌ಆರ್‌ಟಿಸಿ) ವಿಶೇಷ ಬಸ್‌ನಲ್ಲಿ ಕೆಲವು ಹಿರಿಯ ಬಿಆರ್‌ಎಸ್ ನಾಯಕರೊಂದಿಗೆ ಮುಂಭಾಗದಲ್ಲಿ ಕುಳಿತಿದ್ದರು. ತಮ್ಮ ಅಧಿಕೃತ ನಿವಾಸವಾದ ಪ್ರಗತಿ ಭವನದಿಂದ ಪ್ರಯಾಣ ಆರಂಭವಾಗುತ್ತಿದ್ದಂತೆಯೇ ಮುಂದಿನ ಸೀಟಿನಲ್ಲಿ ಕುಳಿತಿದ್ದ ಸಿಎಂ ಕೆಸಿಆರ್ ಜನರತ್ತ ಕೈ ಬೀಸಿದರು.
ಮಾರ್ಗಮಧ್ಯೆ ಜಮಾಯಿಸಿದ್ದ ಹೆಚ್ಚಿನ ಸಂಖ್ಯೆಯ ಬಿಆರ್‌ಎಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಕೆಸಿಆರ್ ಅವರಿದ್ದ ಬಸ್‌ಗೆ ಪುಷ್ಪವೃಷ್ಟಿ ಸುರಿಸಿದರು. ಎರಡು ದಿನಗಳ ಭೇಟಿಯಲ್ಲಿ ಕೆಸಿಆರ್ ಅವರು ಸೊಲ್ಲಾಪುರದಲ್ಲಿ ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಆರ್‌ಎಸ್ ಸೇರಲು ಉತ್ಸುಕರಾಗಿರುವ ವಿವಿಧ ಪಕ್ಷಗಳ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಪಂಡರಾಪುರ ಷತ್ತು ತುಳಜಾಪುರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸಂಜೆ ಸೊಲ್ಲಾಪುರ ತಲುಪಿದ ನಂತರ ಅಲ್ಲೇ ರಾತ್ರಿ ಉಳಿದುಕೊಳ್ಳಲಿದ್ದಾರೆ. ಮರುದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಎಂ ಸಮ್ಮುಖದಲ್ಲಿ ಸ್ಥಳೀಯ ನಾಯಕ ಭಗೀರಥ ಭಾಲ್ಕೆ ಅವರು ಔಪಚಾರಿಕವಾಗಿ ಬಿಆರ್‌ಎಸ್ ಸೇರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷ ಸೇರ್ಪಡೆ ಕಾರ್ಯಕ್ರಮ: ಪ್ರವಾಸದ ವೇಳೆ ಪಕ್ಷದ ಬಲವರ್ಧನೆಗಾಗಿ ಹಲವು ಮುಖಂಡರು ಮತ್ತು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಿದ್ದಾರೆ. ಪಕ್ಷ ಸೇರ್ಪಡೆ ಬಳಿಕ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ತೆಲಂಗಾಣದಿಂದ ಸೊಲ್ಲಾಪುರಕ್ಕೆ ವಲಸೆ ಬಂದ ಕಾರ್ಮಿಕರನ್ನೂ ಇದೇ ವೇಳೆ ಭೇಟಿ ಮಾಡಲಿದ್ದಾರೆ.
ಇದಾದ ಬಳಿಕ ಮಂಗಳವಾರದಂದು ಪಂಡರಾಪುರಕ್ಕೆ ಭೇಟಿ ನೀಡಿ ವಿಠ್ಠಲನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಿದ್ದಾರೆ. ತರುವಾಯ ಧಾರಾಶಿವ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಲ್ಲಿ ತುಳಜಾ ಭವಾನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಹೈದರಾಬಾದ್‌ಗೆ ಹಿಂತಿರುಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರಕ್ಕೆ ಐದನೇ ಭೇಟಿ: ದೇಶದಾದ್ಯಂತ ಪಕ್ಷದ ಚಟುವಟಿಕೆಗಳನ್ನು ವಿಸ್ತರಿಸಲು ಕೆಲವು ತಿಂಗಳ ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಹೆಸರನ್ನು ಬಿಆರ್‌ಎಸ್ ಎಂದು ಬದಲಾಯಿಸಿದ ನಂತರ ಸಿಎಂ ಕೆಸಿಆರ್ ಮಹಾರಾಷ್ಟ್ರಕ್ಕೆ ನೀಡುತ್ತಿರುವ ಐದನೇ ಭೇಟಿ ಇದಾಗಿದೆ.
ಪಕ್ಷ ವಿಸ್ತರಣೆಗೆ ಮಹಾರಾಷ್ಟ್ರವನ್ನು ಮೊದಲ ರಾಜ್ಯವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಜೂನ್ 15ರಂದು ನಾಗಪುರದಲ್ಲಿ ಪಕ್ಷದ ಕಚೇರಿಯನ್ನು ಉದ್ಘಾಟಿಸಿದ್ದರು. ಈ ಹಿಂದೆ ನಾಂದೇಡ್, ಔರಂಗಾಬಾದ್ ಮತ್ತು ಇತರೆಡೆ ಸಾರ್ವಜನಿಕ ಸಭೆಗಳನ್ನು ನಡೆಸಿದ್ದರು. ಬಿಆರ್‌ಎಸ್‌ಗೆ ಮಹಾರಾಷ್ಟ್ರದಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಲವಾರು ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಬಿಆರ್‌ಎಸ್‌ಗೆ ಸೇರಿದ್ದಾರೆ ಎಂದು ಕೆಸಿಆರ್ ಈ ಹಿಂದೆ ಹೇಳಿದ್ದರು.
ಕೃಷಿ ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆಯೇ ಕೆಸಿಆರ್ ಕೇಂದ್ರೀಕರಿಸಿದ್ದು, ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ 'ಕಿಸಾನ್ ಸರ್ಕಾರ್'ವನ್ನು ತರಲು ತಮ್ಮ ಪಕ್ಷಕ್ಕೆ ಮತ ನೀಡುವಂತೆ ಜನರನ್ನು ಕೋರುತ್ತಿದ್ದಾರೆ. ತೆಲಂಗಾಣದಲ್ಲಿ ತಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು, ಕೃಷಿ ಮತ್ತಿತರ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ಮಹಾರಾಷ್ಟ್ರದಲ್ಲಿ ನಡೆಯುವ ಸಮಾವೇಶಗಳಲ್ಲಿ ಜನರಿಗೆ ತಿಳಿ ಹೇಳಲಾಗುತ್ತಿದೆ. ತೆಲಂಗಾಣ ಮಾದರಿಯ ಅಭಿವೃದ್ಧಿಯನ್ನು ಬಿಂಬಿಸಲಾಗುತ್ತಿದೆ.
ಇದನ್ನೂ ಓದಿ: Businessman robbed: ಬಂದೂಕು ತೋರಿಸಿ ಉದ್ಯಮಿಯ ದರೋಡೆ, ಕಾರು ಅಡ್ಡಗಟ್ಟಿ 2 ಲಕ್ಷದ ಬ್ಯಾಗ್ ದೋಚಿದ ಕಳ್ಳರು!