ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಾಶ್ಮೀರ ಮೂಲದ ಫೊಟೋ ಜರ್ನಲಿಸ್ಟ್ ಭಟ್ ಬುರ್ಹಾನ್ ಅವರು ಹಿಮಾಲಯದಲ್ಲಿ ಕೋವಿಡ್-19 ಕುರಿತು ವಿಶೇಷ ವರದಿ ಪ್ರಸಾರ ಮಾಡಿದ್ದಕ್ಕಾಗಿ ಸುದ್ದಿ ಪ್ರಶಸ್ತಿ ವಿಭಾಗದಲ್ಲಿ 2022ರ ರೋರಿ ಪೆಕ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಲಂಡನ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ನಡೆದಿದ್ದು, ಬುರ್ಹಾನ್ ಅವರನ್ನು ನಿನ್ನೆ ಸಂಜೆ ಪ್ರಶಸ್ತಿ ವಿಜೇತರೆಂದು ಘೋಷಿಸಲಾಗಿದೆ. ನಾನು ಕಾಶ್ಮೀರಕ್ಕಾಗಿ ಮೊಟ್ಟಮೊದಲ ರೋರಿ ಪೆಕ್ ಪ್ರಶಸ್ತಿಯನ್ನು ಪಡೆದಿದ್ದೇನೆ ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ಸುದ್ದಿಗಳನ್ನು ಹೊರತರಲು ಹಗಲಿರುಳು ಶ್ರಮಿಸುತ್ತಿರುವ ಎಲ್ಲಾ ಪತ್ರಕರ್ತರಿಗೂ ಚಿಯರ್ಸ್..!" ಎಂದು ಬುರ್ಹಾನ್ ಟ್ವೀಟ್ ಮಾಡಿದ್ದಾರೆ.
ರೋರಿ ಪೆಕ್ ಟ್ರಸ್ಟ್, ಬುರ್ಹಾನ್ ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದು, ಬುರ್ಹಾನ್ ಅವರಿಗೆ ಈ ಗೌರವ ಸಂದಿರುವುದು ಖುಷಿಯ ವಿಚಾರ. ರೋರಿ ಪೆಕ್ ಪ್ರಶಸ್ತಿಗಾಗಿ ಕಾಶ್ಮೀರಿ ವರದಿ ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದಿದೆ.
ಬುರ್ಹಾನ್ 2018 ರಲ್ಲಿ ಪತ್ರಿಕೋದ್ಯಮ ವೃತ್ತಿಯನ್ನು ಪ್ರಾರಂಭಿಸಿದರು. ಅವರು ಕಾಶ್ಮೀರ ಮತ್ತು ಭಾರತದ ಇತರ ಭಾಗಗಳಿಂದ ವಿವಿಧ ಸಮಸ್ಯೆಗಳ ಬಗ್ಗೆ ವರದಿ ಮಾಡಿದ್ದಾರೆ. ಇದರಲ್ಲಿ ವಿಶೇಷವಾಗಿ ಟ್ರಾನ್ಸ್‌ಜೆಂಡರ್ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳು, ಪಂಜಾಬ್‌ನಲ್ಲಿ ರಾಷ್ಟ್ರವ್ಯಾಪಿ ರೈತರ ಪ್ರತಿಭಟನೆ ಮತ್ತು ಕೋವಿಡ್-19 ಸಾಂಕ್ರಾಮಿಕ ಹೀಗೆ ಹಲವಾರು ವರದಿಗಳು ಇವರದ್ದಾಗಿವೆ.
ಇದನ್ನೂ ಓದಿ: 6 ವಿಭಾಗಗಳಲ್ಲಿ ಪ್ರಶಸ್ತಿ ಘೋಷಿಸಿದ ಇನ್ಫೋಸಿಸ್ ಸೈನ್ಸ್ ಫೌಂಡೇಷನ್