ಕಾಸರಗೋಡು(ಕೇರಳ): ಅನಂತಪುರಂ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಅತಿ ದೊಡ್ಡ ವೈಶಿಷ್ಟ್ಯವಾದ ಬಬಿಯಾ ಮೊಸಳೆ ಇನ್ನಿಲ್ಲ. ಭಾನುವಾರ (9.10.2022) ರಾತ್ರಿ ನಿಧನವಾಗಿದೆ. ಕಳೆದ ಎರಡು ದಿನಗಳಿಂದ ಮೊಸಳೆ ಕಂಡುಬಂದಿದ್ದಲ್ಲವೆಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
ಮೊಸಳೆ ಸುಮಾರು 75 ವರ್ಷಗಳಿಂದ ಇದೇ ಕೊಳದಲ್ಲಿದೆ ಎಂಬ ನಂಬಿಕೆ ಇದೆ. ಬಬಿಯಾದಿಂದ ಇದುವರೆಗೆ ಯಾರೂ ತೊಂದರೆಗೊಳಗಾದ ಉದಾಹರಣೆಯೇ ಇಲ್ಲ. ದೇವರಿಗೆ ಅರ್ಪಿಸಿದ ನೈವೇದ್ಯವನ್ನೇ ತಿಂದು ಬಬಿಯಾ ಜೀವಿಸುತ್ತಿತ್ತು. ಪೂಜೆ ಬಳಿಕ ಅರ್ಚಕರು ಕರೆದಾಗ ಹೊರಬರುತ್ತಿದ್ದ ಬಬಿಯಾ ನೈವೇದ್ಯ ತಿಂದು ಮತ್ತೆ ನೀರಿನೊಳಗೆ ಹೋಗುತ್ತಿತ್ತು. ಪ್ರತಿದಿನ ಎರಡು ಬಾರಿ ಬಬಿಯಾ ನೈವೇದ್ಯ ಸ್ವೀಕರಿಸುತ್ತಿತ್ತು.
ಕಾಸರಗೋಡು ಕುಂಬಳ ಅನಂತಪುರ ದೇವಾಲಯದ ಕೊಳದಲ್ಲಿರುವ ಬಬಿಯಾ ಸಸ್ಯಾಹಾರಿ ಮೊಸಳೆ ಎಂದೇ ಪ್ರಖ್ಯಾತ. ಸದಾ ಕೊಳ ಮತ್ತು ಅದರ ಸುತ್ತಮುತ್ತ ಕಾಲ ಕಳೆಯುತ್ತಿದ್ದ ಬಬಿಯಾ ಒಮ್ಮೆ ದೇವಸ್ಥಾನದ ಪ್ರಾಂಗಣದೊಳಗೆ ಬಂದು ಸ್ವಾಮಿಯ ದರ್ಶನ ಪಡೆದಿತ್ತು. ಬಬಿಯಾ ದೇವಸ್ಥಾನದ ಪ್ರಾಂಗಣದೊಳಗೆ ಕೊಂಚ ಸಮಯ ಕಾಲ ಕಳೆದಿದೆ. ದೇವಸ್ಥಾನದ ದಾರಿಯಲ್ಲಿ ಮಲಗಿರುವ ಬಬಿಯಾವನ್ನು ಕಂಡ ಪ್ರಧಾನ ಅರ್ಚಕರು ಕೈ ಮುಗಿದು ದೇವರ ಮಂತ್ರ ಪಠಿಸಿದ್ದಾರೆ. ಬಳಿಕ ತನ್ನ ಶಾಶ್ವತ ಆವಾಸಸ್ಥಾನಕ್ಕೆ ತೆರಳುವಂತೆ ಕೇಳಿಕೊಂಡಾಗ ಬಬಿಯಾ ಕೊಳಕ್ಕೆ ಹಿಂತಿರುಗಿತ್ತು. ಈ ವೇಳೆ ಅರ್ಚಕರೊಬ್ಬರು ಬಬಿಯಾದ ಫೋಟೋಗಳನ್ನು ಕ್ಲಿಕ್ಕಿಸಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಓದಿ: ಕೊಳದಿಂದ ಮೊದಲ ಬಾರಿಗೆ ದೇವಾಲಯ ಆವರಣಕ್ಕೆ ಬಂದ ಬಬಿಯಾ... ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್!
ಅನಂತಪದ್ಮನಾಭ ದೇಗುಲದ ಭಕ್ತರಿಗೂ ಈ ಬಬಿಯಾ ಕಂಡರೆ ವಿಶೇಷ ಪ್ರೀತಿ, ಗೌರವ ಮತ್ತು ಭಕ್ತಿ. ದೇವಾಲಯದ ರಕ್ಷಣೆಗಾಗಿ ದೇವರು ನೇಮಿಸಿದ ರಕ್ಷಕ ಬಬಿಯಾ ಎಂಬ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ. ಬ್ರಿಟಿಷರು ತಮ್ಮ ಆಳ್ವಿಕೆಯಲ್ಲಿ ಈ ಸರೋವರದಲ್ಲಿದ್ದ ಮೊಸಳೆಯನ್ನು ಹೊಡೆದು ಕೊಂದಿದ್ದರು. ಆದರೆ ಬಬಿಯಾ ಎಲ್ಲಿಂದ ಬಂದಿದ್ದಾಳೆಂದು ಯಾರಿಗೂ ತಿಳಿದಿರಲಿಲ್ಲ. ತಾನಾಗಿಯೇ ಕೆರೆಯಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತದೆ.
ಈ ಹಿಂದೆ 2019ರಲ್ಲಿ ಬಬಿಯಾ ಬದುಕಿಲ್ಲ ಎಂಬ ಸುದ್ದಿ ಹರಡಿತ್ತು. ಆದರೆ, ದೇವಸ್ಥಾನದ ಅಧಿಕಾರಿಗಳು ಈ ವದಂತಿಯನ್ನು ನಿರಾಕರಿಸಿದ್ದರು. ಇದಕ್ಕೆ ಯಾವುದೇ ಆಧಾರವಿಲ್ಲ ಮತ್ತು ಮೊಸಳೆ ಇನ್ನೂ ಆರೋಗ್ಯವಾಗಿದೆ ಎಂದು ಹೇಳಿದ್ದರು. ಬಬಿಯಾ ಸಾವಿನ ಪ್ರಚಾರದ ನಂತರವೂ ಮೊಸಳೆ ದೇವಸ್ಥಾನದ ಅಂಗಳವನ್ನು ತಲುಪಿತ್ತು.
ದೇವಾಲಯದ ಇತಿಹಾಸ ಹೀಗಿದೆ.. ಅನಂತಪುರ ಸರೋವರ ದೇವಾಲಯವನ್ನು 9 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಈ ದೇವಾಲಯದ ನಿರ್ಮಾಣದಲ್ಲಿ ಪ್ರಾಚೀನ ವಾಸ್ತುಶಿಲ್ಪದ ಸುಂದರ ನೋಟಗಳನ್ನು ಕಾಣಬಹುದು. ಕೆರೆಯ ಮಧ್ಯದಲ್ಲಿ ದೇವಾಲಯ ನಿರ್ಮಾಣವಾಗಿರುವುದರಿಂದ ಭಾರಿ ಮಳೆಯ ಸಂದರ್ಭದಲ್ಲಿ ನೀರಿನ ಮಟ್ಟ ಹೆಚ್ಚಾಗುವ ಅನುಮಾನ ಸಹಜವಾಗಿ ಮೂಡಬಹುದು. ಆದರೆ ಈ ದೇವಾಲಯವು ಆ ವಿಷಯದಲ್ಲಿಯೂ ಒಂದು ಪವಾಡವಾಗಿದೆ. ಭಾರಿ ಮಳೆಯ ಸಮಯದಲ್ಲಿಯೂ ಈ ದೇವಾಲಯದಲ್ಲಿ ನೀರಿನ ಮಟ್ಟ ಏರುವುದಿಲ್ಲ. ಸರೋವರದ ಬಲಭಾಗದಲ್ಲಿ ಗುಹೆಯೊಂದಕ್ಕೆ ಪ್ರವೇಶದ್ವಾರವಿದೆ ಮತ್ತು ಆ ಗುಹೆಯು ತಿರುವನಂತಪುರದವರೆಗೆ ವಿಸ್ತರಿಸಿದೆ ಎಂದು ನಂಬಲಾಗಿದೆ.
ಪದ್ಮನಾಭನ ವಿಗ್ರಹವನ್ನು ಬೆಲ್ಲ, ಜೇನುಮೇಣ, ತೆಂಗಿನ ಎಣ್ಣೆ ಮತ್ತು ಗೋಧಿ ಪುಡಿ ಸೇರಿದಂತೆ 64 ಪದಾರ್ಥಗಳನ್ನು ಸೇರಿಸಿ ತಯಾರಿಸಲಾಗಿದೆ. ದೇವಾಲಯದ ಗೋಡೆಗಳ ಮೇಲಿನ ಚಿತ್ರಗಳು ಸಂಪೂರ್ಣವಾಗಿ ನೈಸರ್ಗಿಕ ಬಣ್ಣಗಳಿಂದ ಚಿತ್ರಿಸಲಾಗಿದೆ. ಈ ಚಿತ್ರಗಳು ಸಾವಿರ ವರ್ಷಗಳಷ್ಟು ಹಳೆಯವು ಎಂದು ಹೇಳಲಾಗುತ್ತದೆ.
ಓದಿ: ಗಡಿಭಾಗದ ಅನಂತ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಸಸ್ಯಹಾರಿ ಮೊಸಳೆ: ಇದಕ್ಕಿದೆ ಇತಿಹಾಸ!