ಸಂಗಾರೆಡ್ಡಿ(ತೆಲಂಗಾಣ): ಸುಖನಿದ್ರೆಯಲ್ಲಿದ್ದ ಕಾರ್ಮಿಕರ ಮೇಲೆ ಜವರಾಯ ಲಾರಿಯ ರೂಪದಲ್ಲಿ ಬಂದೆರಗಿದ್ದಾನೆ. ಇಂದು ಮುಂಜಾವು 4 ಗಂಟೆಗೆ ನಡೆದ ಭೀಕರ ಅಪಘಾತದಲ್ಲಿ ಕರ್ನಾಟಕ ನಿವಾಸಿಗಳಾದ ಒಂದೇ ಕುಟುಂಬದ ಮೂವರು ದಾರುಣ ಸಾವನ್ನಪ್ಪಿದ್ದಾರೆ. ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಹೊರವರ್ತುಲ ರಸ್ತೆಯಲ್ಲಿ ದುರಂತ ಘಟಿಸಿದೆ.
ಏನಾಯ್ತು?: ಸಂಗಾರೆಡ್ಡಿ ಜಿಲ್ಲೆಯ ಹೊರವರ್ತುಲ ರಸ್ತೆಯ ಕೊಲ್ಲೂರಿನಲ್ಲಿ ಬೆಳಗಿನ ಜಾವ 4 ಗಂಟೆಗೆ ಗುಡಿಸಲಿನ ಮೇಲೆ ಲಾರಿ ಹರಿಯಿತು. ಇದರಿಂದ ನಿದ್ರೆಯಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದರು. ಬಾಬು ರಾಠೋಡ್, ಕಮಲಿಬಾಯ್ ಮತ್ತು ಬಸಪ್ಪ ರಾಠೋಡ್ ಮೃತರೆಂದು ತಿಳಿದುಬಂದಿದೆ. ಯಮನಂತೆ ಅಪ್ಪಳಿಸಿದ ಲಾರಿ ಪಟಾಣ್ ಚೆರು ಕಡೆಯಿಂದ ಗಚ್ಚಿಬೌಳಿ ಮಾರ್ಗವಾಗಿ ಹರಿಯಾಣದಿಂದ ಚಿತ್ತೂರಿಗೆ ತೆರಳುತ್ತಿತ್ತು.
ಹೊರ ವರ್ತುಲ ರಸ್ತೆಯುದ್ದಕ್ಕೂ ಇರುವ ಗಿಡಗಳಿಗೆ ನೀರುಣಿಸಲು ಕರ್ನಾಟಕದ ಮೂಲದ ಕೆಲವರು ಎಚ್‌ಎಂಡಿಎ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕೊಲ್ಲೂರು ಜಂಕ್ಷನ್ ಬಳಿ ರಿಂಗ್ ರಸ್ತೆ ಮತ್ತು ಸವೀಸ್ ರಸ್ತೆ ಪಕ್ಕ ತಾತ್ಕಾಲಿಕ ಗುಡಿಸಲುಗಳಲ್ಲಿ ಇವರೆಲ್ಲರೂ ವಾಸಿಸುತ್ತಿದ್ದಾರೆ. ಲಾರಿ ರಿಂಗ್ ರಸ್ತೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಗುಡಿಸಲಿನ ಮೇಲೆ ಹರಿದಿದೆ. ಅಕ್ಕಪಕ್ಕ ಹತ್ತು ಗುಡಿಸಲುಗಳಿದ್ದು, ಅವುಗಳಿಗೂ ಡಿಕ್ಕಿ ಹೊಡೆದಿದ್ದರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುತ್ತಿತ್ತು.
ಮಿಯಾಪುರ ಎಸಿಪಿ ನರಸಿಂಹರಾವ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತ ಸ್ಥಳದಲ್ಲಿ ಅವಶೇಷಗಳನ್ನು ತೆರವು ಮಾಡಿ, ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಮಾಡಲಾಗಿದೆ. ಅಪಘಾತ ಸ್ಥಳದಲ್ಲಿ ಲಾರಿ ಅರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ಕಂಬಿಬೇಲಿಯನ್ನು ನಾಶ ಮಾಡಿದೆ. ಅತಿಯಾದ ವೇಗ ಮತ್ತು ಚಾಲಕನ ನಿದ್ದೆಯೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬದುಕು ಅರಸಿ ಬಂದಿದ್ದ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದರಿಂದ ಆಸ್ಪತ್ರೆಯಲ್ಲಿ ಸಂಬಂಧಿಕರು, ಕುಟುಂಬಸ್ಥರ ರೋದನ ಮುಗಿಲುಮುಟ್ಟಿತ್ತು.
ಇದನ್ನೂ ಓದಿ: ತಾಯಿ ತೀರಿದ ಅರಿವಿಲ್ಲದೇ ಮೃತದೇಹದೊಂದಿಗೆ 2 ದಿನ ಕಳೆದ ಬಾಲಕ!