ನವದೆಹಲಿ: ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಬ್ಬಿಣ ಅದಿರು ರಫ್ತು ಮೇಲಿನ ನಿರ್ಬಂಧವನ್ನು ಸುಪ್ರೀಂಕೋರ್ಟ್ ತೆರವು ಮಾಡಿದೆ. ಈಗಾಗಲೇ ಅಗೆದ ಅದಿರನ್ನು ಸಾಗಿಸಲು ಗಣಿ ಕಂಪನಿಗಳಿಗೆ ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ್ ಮತ್ತು ನ್ಯಾ.ಕೃಷ್ಣ ಮುರಾರಿ ಹಾಗೂ ನ್ಯಾ.ಹಿಮಾ ಕೊಹ್ಲಿಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಮಿತಿ ಮೀರಿ ಗಣಿಗಾರಿಕೆ ಮಾಡಿದ್ದರಿಂದ ಕರ್ನಾಟಕದಿಂದ ಕಬ್ಬಿಣದ ಅದಿರು ರಫ್ತು ಮಾಡುವುದನ್ನು 2012ರಲ್ಲಿ ಸುಪ್ರೀಂಕೋರ್ಟ್ ನಿಷೇಧಿಸಿತ್ತು. ಪರಿಸರಕ್ಕೆ ಹಾನಿ ತಡೆಗಟ್ಟುವ ಮತ್ತು ರಾಜ್ಯದ ಖನಿಜ ಸಂಪನ್ಮೂಲಗಳನ್ನು ಸಂರಕ್ಷಿಸುವ ಉದ್ದೇಶದಿಂದ ಈ ನಿರ್ಬಂಧ ಹೇರಿತ್ತು. ಆದರೆ, ಅದಿರು ಮಾರಾಟ ಮತ್ತು ರಫ್ತಿನ ಮೇಲಿನ ನಿರ್ಬಂಧವನ್ನು ತೆಗೆದುಹಾಕುವಂತೆ ಗಣಿಗಾರಿಕೆ ಕಂಪನಿಗಳು ಮನವಿ ಮಾಡಿದ್ದವು. ಅಂತೆಯೇ, ನ್ಯಾಯಪೀಠವು ಕೇಂದ್ರ ಸರ್ಕಾರದ ನಿಲುವು ಮತ್ತು ಅಧಿಕಾರಿಗಳು ವಿಧಿಸಿರುವ ಷರತ್ತುಗಳ ಆಧಾರದ ಮೇಲೆ ಗಣಿ ಸಂಸ್ಥೆಗಳು ಅದಿರು ಸಾಗಿಸಬಹುದು ಎಂದು ಹೇಳಿದೆ.
ಈಗಾಗಲೇ ಅಗೆದ ಕಬ್ಬಿಣ ಅದಿರಿನ ದಾಸ್ತಾನು ಸಾಗಿಸಲು ಅನುಮತಿ ನೀಡಲಾಗುತ್ತಿದೆ. ಕರ್ನಾಟಕದ ಮೂರು ಜಿಲ್ಲೆಗಳಿಂದ ಇ-ಹರಾಜು ಪ್ರಕ್ರಿಯೆ ಇಲ್ಲದೇ ನೇರವಾಗಿ ಕಬ್ಬಿಣದ ಅದಿರು ವಿದೇಶಕ್ಕೆ ಸಾಗಿಸಲು ಅವಕಾಶ ಕೊಡಲಾಗುತ್ತಿದೆ. ಆದರೆ, ಭಾರತ ಸರ್ಕಾರದ ನೀತಿಗಳನ್ನು ಗಣಿ ಕಂಪನಿಗಳು ಪಾಲಿಸಬೇಕೆಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.