ನವದೆಹಲಿ: ಕರ್ನಾಟಕದಲ್ಲಿ ಗಣಿಗಾರಿಕೆ ವಿಚಾರವಾಗಿ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಎಎಸ್ ಬೋಪಣ್ಣ ಅವರು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಸಿಜೆಐ ಯು ಯು ಲಲಿತ್ ಅವರು ಕರ್ನಾಟಕ ಗಣಿಗಾರಿಕೆ ವಿಷಯವನ್ನು ನ್ಯಾಯಮೂರ್ತಿ ಕೆ ಎಂ ಜೋಸೆಫ್ ನೇತೃತ್ವದ ಪೀಠಕ್ಕೆ ನಿಯೋಜನೆ ಮಾಡಿ ಆದೇಶ ನೀಡಿದ್ದಾರೆ. ಮುಂದಿನ ವಾರಕ್ಕೆ ಈ ವಿಚಾರಣೆಯನ್ನು ಮುಂದೂಡಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ಭಾರತ ವಿವಿಧತೆಯಲ್ಲಿ ಏಕತೆ ಇರುವ ದೇಶ. ಈ ಅಂಶವನ್ನು ಕಾಪಾಡಿಕೊಳ್ಳುವ ಮಾರ್ಗದಲ್ಲಿ ಸುಪ್ರೀಂ ಮಹತ್ವದ ಆದೇಶ ಹೊರಡಿಸಿದೆ. ಉತ್ತರ ಪ್ರದೇಶ, ಛತ್ತೀಸ್‌ಗಢ, ಹರಿಯಾಣ, ಒಡಿಶಾ, ಮಧ್ಯಪ್ರದೇಶ, ಬಿಹಾರ, ಕರ್ನಾಟಕ ಮತ್ತು ಜಾರ್ಖಂಡ್‌ಗಳಿಂದ ಕ್ರಿಶ್ಚಿಯನ್ ಸಂಸ್ಥೆಗಳು ಮತ್ತು ಪಾದ್ರಿಗಳ ಮೇಲಿನ ದಾಳಿಗಳ ಕುರಿತು ಕೈಗೊಂಡ ಕ್ರಮಗಳ ಪರಿಶೀಲನಾ ವರದಿಗಳನ್ನು ಪಡೆಯುವಂತೆ ಸುಪ್ರೀಂ ಕೋರ್ಟ್ ಗೃಹ ಸಚಿವಾಲಯಕ್ಕೆ ಆದೇಶ ನೀಡಿದೆ.
ಈ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಎಫ್‌ಐಆರ್‌ಗಳ ನೋಂದಣಿ, ತನಿಖೆಯ ಸ್ಥಿತಿಗತಿ, ಬಂಧನ ವಿವರ ಮತ್ತು ಚಾರ್ಜ್‌ಶೀಟ್‌ಗಳ ದಾಖಲಾತಿಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಸಂಬಂಧ ನ್ಯಾಯಾಲಯವು ಎರಡು ತಿಂಗಳ ಕಾಲಾವಕಾಶ ಸಹ ನೀಡಿದೆ.
ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಈ ಆದೇಶ ನೀಡಿದೆ. ರಾಷ್ಟ್ರೀಯ ಸಾಲಿಡಾರಿಟಿ ಫೋರಂನ ರೆ.ಡಾ.ಪೀಟರ್ ಮಚಾಡೊ, ಇವಾಂಜೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾದ ರೆ.ವಿ.ವಿಜಯೇಶ್ ಲಾಲ್ ಮತ್ತು ಇತರರು ದೇಶದಲ್ಲಿ ಕ್ರಿಶ್ಚಿಯನ್ ಸಮುದಾಯದ ಸದಸ್ಯರ ವಿರುದ್ಧ ಹಿಂಸಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ ಮನವಿಯ ಮೇಲೆ ನ್ಯಾಯಾಲಯದ ಆದೇಶ ಬಂದಿದೆ.
ಇದನ್ನೂ ಓದಿ : ಆಸ್ತಿಯಲ್ಲಿ ಸಮಾನ ಹಕ್ಕಿಗಾಗಿ ಹೋರಾಡಿದ ಸಾಮಾಜಿಕ ಕಾರ್ಯಕರ್ತೆ ಮೇರಿ ರಾಯ್ ನಿಧನ