ಪಣಜಿ (ಗೋವಾ) : ಕರ್ನಾಟಕ ಮತ್ತು ಗೋವಾ ನಡುವಿನ ಮಹದಾಯಿ ವಿವಾದ ಇನ್ನೂ ಇತ್ಯರ್ಥವಾಗಿಲ್ಲ. ಈ ಮಧ್ಯೆ, ಕರ್ನಾಟಕಕ್ಕೆ ಕುಡಿಯುವ ಉದ್ದೇಶಕ್ಕಾಗಿ ಮಹದಾಯಿ ನೀರನ್ನು ನೀಡಲು ಯಾವುದೇ ಸಮಸ್ಯೆ ಇಲ್ಲ, ಆದರೆ ಕರ್ನಾಟಕವು ಉಕ್ಕಿನ ಕಾರ್ಖಾನೆಗಳಿಗಾಗಿ ನದಿ ನೀರನ್ನು ತಿರುಗಿಸಲು ಮುಂದಾಗಿದೆ ಎಂದು ದಕ್ಷಿಣ ಗೋವಾ ಸಂಸದ ಫ್ರಾನ್ಸಿಸ್ಕೊ ಸರ್ದಿನ್ಹಾ ಹೇಳಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ನೀರಾವರಿ ಉದ್ದೇಶಕ್ಕೆ ಮಹದಾಯಿ ನೀರನ್ನು ಒದಗಿಸಿದರೆ ಗೋವಾಕ್ಕೆ ಸಂಕಷ್ಟ ಎದುರಾಗಲಿದೆ ಎಂದು ಹೇಳಿದರು. ಕುಡಿಯುವ ಉದ್ದೇಶಕ್ಕಾಗಿ ನೀರನ್ನು ತೆಗೆದುಕೊಂಡರೆ ನಮಗೆ ಯಾವುದೇ ತೊಂದರೆ ಇಲ್ಲ. ಆದರೆ ನೀರಾವರಿ ಉದ್ದೇಶಗಳಿಗೆ ನೀರು ತೆಗೆದುಕೊಳ್ಳುವುದನ್ನು ನಾವು ಅನುಮತಿಸುವುದಿಲ್ಲ. ಕರ್ನಾಟಕವು ಉಕ್ಕಿನ ಕಾರ್ಖಾನೆಗಳಿಗೆ ನೀರು ಒದಗಿಸಲು ಮಹದಾಯಿ ನೀರನ್ನು ತಿರುಗಿಸುತ್ತಿದೆ ಎಂದು ಸರ್ದಿನ್ಹಾ ಆರೋಪಿಸಿದರು.
ಒಂದು ವೇಳೆ ಮಹದಾಯಿ ನೀರನ್ನು ಬೇರೆಡೆಗೆ ತಿರುಗಿಸಿದರೆ ಇಲ್ಲಿನ ಪರಿಸರ, ಸಸ್ಯ ಸಂಕುಲದ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಪ್ರಕೃತಿ ನಾಶವಾಗುತ್ತದೆ. ಇದರಿಂದ ಗೋವಾದಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ನೀರಿಲ್ಲದೆ ಇಲ್ಲಿನ ಜನರ ಪರಿಸ್ಥಿತಿ ಏನಾಗುತ್ತದೋ ಯಾರಿಗೂ ಗೊತ್ತಿಲ್ಲ. ಆದ್ದರಿಂದ ಗೋವಾ ಸರಕಾರ ಇಲ್ಲಿನ ಜನರ ಹಿತಾಸಕ್ತಿಯನ್ನು ನೋಡಬೇಕು ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕರ್ನಾಟಕ ಭೇಟಿಯನ್ನು ಉಲ್ಲೇಖಿಸಿದ ಅವರು, ಅಮಿತ್ ಶಾ ಅವರು ಕರ್ನಾಟಕದಲ್ಲಿ ಮಹದಾಯಿ ನದಿ ತಿರುವು ಬಗ್ಗೆ ಹೇಳಿಕೆ ನೀಡಿದ್ದಾರೆ. ಜನವರಿ 28 ರಂದು ಬೆಳಗಾವಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, ಕೇಂದ್ರ ಬಿಜೆಪಿ ಸರ್ಕಾರವು ಗೋವಾ ಮತ್ತು ಕರ್ನಾಟಕದ ನಡುವಿನ ಮಹದಾಯಿ ವಿಚಾರದ ಸುದೀರ್ಘ ವಿವಾದವನ್ನು ಬಗೆಹರಿಸಿದೆ. ಜೊತೆಗೆ ಕರ್ನಾಟಕಕ್ಕೆ ಅನುಕೂಲವಾಗುವಂತೆ ಮಹದಾಯಿ ಯೋಜನೆ ನಡೆಸಲು ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ಇಲ್ಲಿನ ಹಲವು ಜಿಲ್ಲೆಗಳ ರೈತರ ನೀರಿನ ಸಮಸ್ಯೆಗೆ ಬಗೆಹರಿಸಲು ಮುಂದಾಗಿದೆ ಎಂದು ಹೇಳಿದ್ದರು. ಒಂದು ಕಡೆ ಮಹಾರಾಷ್ಟ್ರವು ನೀರು ತೆಗೆದುಕೊಳ್ಳುತ್ತಿದೆ, ಇನ್ನೊಂದೆಡೆ ಕರ್ನಾಟಕವೂ ನೀರು ತೆಗೆದುಕೊಳ್ಳುತ್ತಿದೆ. ಆದರೆ ಗೋವಾ ಸರಕಾರ ಮಾತ್ರ ಈ ಬಗ್ಗೆ ಏನೂ ಮಾತನಾಡುತ್ತಿಲ್ಲ ಎಂದು ಸರ್ದಿನ್ಹಾ ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸಿಂಧುದುರ್ಗ ಜಿಲ್ಲೆಯ ವಲ್ವಂತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗುತ್ತಿರುವ ವಿವಾದಿತ ವಿರ್ಡಿ ಅಣೆಕಟ್ಟಿನ ಕಾಮಗಾರಿ ಪುನರಾರಂಭಿಸಲಾಗಿರುವ ಬಗ್ಗೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಮಾತನಾಡುವುದಾಗಿ ಹೇಳಿದ್ದರು.
ಜೊತೆಗೆ ನಮ್ಮ ಅಧಿಕಾರಿಗಳು ವಿರ್ಡಿ ಅಣೆಕಟ್ಟಿನ ಸ್ಥಳಕ್ಕೆ ಭೇಟಿ ನೀಡಿದ್ದರು. ನಮ್ಮ ಕೋರಿಕೆಯ ಮೇರೆಗೆ ಮಹಾರಾಷ್ಟ್ರವು ಅಣೆಕಟ್ಟಿನ ಕಾಮಗಾರಿಯನ್ನು ನಿಲ್ಲಿಸಿದೆ. ಇನ್ನು ಮಹಾರಾಷ್ಟ್ರವು ಕಾಮಗಾರಿಯನ್ನು ಪ್ರಾರಂಭಿಸಲು ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರದಿಂದ (ಪ್ರವಾಹ್) ಅನುಮತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಾವಂತ್ ಹೇಳಿದ್ದರು. ಮಹದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ಸಂದರ್ಭದಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಗೋವಾ ಹೇಳಿದೆ.
ಗೋವಾ ಮತ್ತು ಕರ್ನಾಟಕ ಸದ್ಯ ಕೇಂದ್ರೀಯ ನ್ಯಾಯಾಧೀಕರಣದಲ್ಲಿ ಮಹದಾಯಿ ನದಿ ನೀರಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಕಳಸಾ-ಬಂಡೂರಿ ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ವಿವಾದವನ್ನು ಎದುರಿಸುತ್ತಿವೆ.
ಇದನ್ನೂ ಓದಿ : ಮಹದಾಯಿ ಬೇಡಿಕೆ ಈಡೇರಿಸುವಂತೆ ಕಾಶಿ ವಿಶ್ವನಾಥನಿಗೆ ಅಭಿಷೇಕ... ಚುನಾವಣೆಗೆ ಸ್ಪರ್ಧಿಸಲು ಹೋರಾಟಗಾರರಿಂದ ಸಿದ್ಧತೆ