ನವದೆಹಲಿ: ಕಾಲೇಜು ಕ್ಯಾಂಪಸ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಲು ರಾಜ್ಯದ ಸರ್ಕಾರಿ ಕಾಲೇಜುಗಳಿಗೆ ಪರಿಣಾಮಕಾರಿಯಾಗಿ ಅಧಿಕಾರ ನೀಡುವ ಕರ್ನಾಟಕ ಸರ್ಕಾರದ ಆದೇಶವನ್ನು (GO) ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಗುರುವಾರ ವಿಭಿನ್ನ ತೀರ್ಪು ನೀಡಿದೆ.
ಪೀಠದ ನೇತೃತ್ವದ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅದನ್ನು ತಳ್ಳಿಹಾಕಿದರು. "ಈ ತೀರ್ಪಿನ ಬಗ್ಗೆ ಭಿನ್ನವಾದ ಅಭಿಪ್ರಾಯಗಳು ವ್ಯಕ್ತವಾಗಿವೆ. ನಾನು ಮೇಲ್ಮನವಿದಾರರ ವಿರುದ್ಧ ತೀರ್ಪು ನೀಡುತ್ತಿದ್ದು, ಅವರ ಮೇಲ್ಮನವಿಯನ್ನು ವಜಾಗೊಳಿಸುತ್ತೇನೆ'' ಎಂದು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಹೇಳಿದರು.
ನ್ಯಾಯಮೂರ್ತಿ ಧುಲಿಯಾ ಅವರು ಮೇಲ್ಮನವಿಯನ್ನು ಅಂಗೀಕರಿಸಿ ಕರ್ನಾಟಕ ಸರ್ಕಾರದ ಆದೇಶವನ್ನು ರದ್ದುಗೊಳಿಸಿದರು. ''ನನಗೆ ಅತ್ಯಂತ ಪ್ರಮುಖವಾದ ವಿಷಯವೆಂದರೆ ಹೆಣ್ಣು ಮಕ್ಕಳ ಶಿಕ್ಷಣ. ಹಲವು ಪ್ರದೇಶಗಳಲ್ಲಿ ಹೆಣ್ಣು ಮಗು ಶಾಲೆಗೆ ಹೋಗುವ ಮೊದಲು ಮನೆಕೆಲಸ ಸೇರಿದಂತೆ ಇನ್ನಿತರ ಕೆಲಸ ಕಾರ್ಯಕ್ಕೆ ಹೋಗುತ್ತಾಳೆ. ನಾವು ಹಿಜಾಬ್ ನಿಷೇಧಿಸುವುದರಿಂದ ಅವಳ ಜೀವನವನ್ನು ಉತ್ತಮಗೊಳಿಸುತ್ತೇವೆಯೇ'' ಎಂದು ನ್ಯಾಯಮೂರ್ತಿ ಧುಲಿಯಾ ಪ್ರಶ್ನಿಸಿದರು. ಹೀಗಾಗಿ ಈ ವಿಷಯವನ್ನು ಈಗ ಸರ್ವೋಚ್ಛ ನ್ಯಾಯಾಲಯದ ದೊಡ್ಡ ಪೀಠವು ವಿಚಾರಣೆ ನಡೆಸಲಿದೆ. ವಿಭಿನ್ನ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು, ಸೂಕ್ತ ನಿರ್ದೇಶನಗಳಿಗಾಗಿ ಈ ವಿಷಯವನ್ನು ಸಿಜೆಐ ಮುಂದೆ ಇಡಲು ಪೀಠವು ನಿರ್ದೇಶಿಸಿದೆ'' ಎಂದರು.
ನ್ಯಾಯಮೂರ್ತಿ ಗುಪ್ತಾ ತಮ್ಮ ತೀರ್ಪಿನಲ್ಲಿ ಹನ್ನೊಂದು ಪ್ರಶ್ನೆಗಳನ್ನು ಎತ್ತಿದರು. ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದಡಿ ಅಗತ್ಯ ಧಾರ್ಮಿಕ ಆಚರಣೆ (ಇಆರ್‌ಪಿ) ಅಲ್ಲ. ರಾಜ್ಯ ಸರ್ಕಾರದ ಆದೇಶ (ವಿದ್ಯಾರ್ಥಿಗಳು) ಶಿಕ್ಷಣ ಪಡೆಯಬೇಕು ಎಂಬ ಉದ್ದೇಶ ಹೊಂದಿದೆ ಎಂದು ಹೇಳಿದ ಅವರು ಮೇಲ್ಮನವಿಗಳನ್ನು ವಜಾಗೊಳಿಸಿದರು.
ನ್ಯಾಯಮೂರ್ತಿ ಧುಲಿಯಾ, ''ಇಆರ್‌ಪಿ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕರ್ನಾಟಕ ಹೈಕೋರ್ಟ್ ತಪ್ಪು ಹೆಜ್ಜೆ ಇರಿಸಿದೆ ಎಂದರು. ಇದು ಕೇವಲ ಆಯ್ಕೆಯ ಪ್ರಶ್ನೆಯಾಗಿತ್ತು. ಬಿಜೋಯ್ ಇಮ್ಯಾನುಯೆಲ್ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಅನುಪಾತವು ಪ್ರಕರಣದ ಕುರಿತು ಸಂಪೂರ್ಣವಾಗಿ ಹೇಳುತ್ತದೆ" ಎಂದು ನ್ಯಾಯಮೂರ್ತಿ ಧುಲಿಯಾ ತೀರ್ಪು ನೀಡಿದರು.
ಯಥಾಸ್ಥಿತಿ ಮುಂದುವರಿಕೆ: ತೀರ್ಪು ಹೊರಬೀಳುತ್ತಿದ್ದಂತೆ ಅದನ್ನು ಸ್ವಾಗತಿಸುತ್ತಿರುವುದಾಗಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ ಹೇಳಿದ್ದಾರೆ. ಪರಿಣಾಮ ಹೈಕೋರ್ಟ್ ಆದೇಶ ಯಥಾಸ್ಥಿತಿ ರೀತಿಯಲ್ಲಿ ಮುಂದುವರೆಯಲಿದ್ದು, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಇರುವುದಿಲ್ಲ ಎಂದು ವರದಿಗಳು ತಿಳಿಸಿವೆ.
ಓದಿ: ಹಿಜಾಬ್ ವಿವಾದ.. ಸುಪ್ರೀಂ ಕೋರ್ಟ್ ಪೀಠದಿಂದ ಭಿನ್ನ ತೀರ್ಪು.. ಮುಖ್ಯ ನ್ಯಾಯಮೂರ್ತಿ ಅಂಗಳಕ್ಕೆ