ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಿರುದ್ಧ ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠ ನೀಡಿದ್ದ ಎಲ್ಲ ನಿರ್ದೇಶನಗಳಿಗೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದೆ. ಈವರೆಗೆ ಎಸಿಬಿಯಿಂದ ತನಿಖೆ ಮುಗಿದ ಪ್ರಕರಣಗಳ ಪಟ್ಟಿ ಹಾಗೂ ಅಧಿಕಾರಿಗಳ ಸೇವಾ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಈ ತಡೆ ಅನ್ವಯಿಸುತ್ತದೆ. ಈ ಪ್ರಕರಣದಲ್ಲಿ ಜಾಮೀನು ಅರ್ಜಿ ವಿಚಾರಣೆಯನ್ನು ಮೊದಲಿಗೆ ಇತ್ಯರ್ಥಪಡಿಸುವಂತೆ ಸುಪ್ರೀಂಕೋರ್ಟ್, ಹೈಕೋರ್ಟ್ಗೆ ನಿರ್ದೇಶನ ನೀಡಿದೆ.
ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ಪೀಠ, ಆರೋಪಿಯ ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಅಪ್ರಸ್ತುತ ಅವಲೋಕನಗಳನ್ನು ಮಾಡಿದ್ದಾರೆ ಮತ್ತು ಜಾಮೀನು ಅರ್ಜಿಯ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಹೇಳಿತು.
ಆರೋಪಿಗೆ ಸಂಬಂಧವಿರಲಾರದ ವಿಚಾರಣೆಗಳನ್ನು ಹೈಕೋರ್ಟ್ ನಡೆಸುವುದಕ್ಕೆ ತಡೆ ನೀಡಲಾಗಿದೆ. ಆರೋಪಿಯ ಜಾಮೀನು ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವಂತೆ ನಾವು ಹೈಕೋರ್ಟ್ಗೆ ಮನವಿ ಮಾಡುತ್ತೇವೆ. 3 ವಾರಗಳ ನಂತರ ಇದರ ವಿಚಾರಣೆ ಲಿಸ್ಟ್ ಮಾಡಿ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಹೈಕೋರ್ಟ್ ಪೀಠ ನೀಡಿರುವ ಪ್ರತಿಕೂಲ ಹೇಳಿಕೆಗಳನ್ನು ಅನೂರ್ಜಿತಗೊಳಿಸುವಂತೆ ಪೀಠಕ್ಕೆ ಮನವಿ ಮಾಡಿದರು.
ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿ, ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತೀವ್ರ ಟೀಕಾ ಪ್ರಹಾರ ಎದುರಿಸಿದ್ದ ಐಎಎಸ್ ಆಧಿಕಾರಿ ಜೆ. ಮಂಜುನಾಥ್ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಸ್. ನಾಗಮುತ್ತು, ಈ ಪ್ರಕರಣದ ವಿಚಾರಣೆಯನ್ನು ಬೇರೆ ಯಾವುದಾದರೂ ಪೀಠಕ್ಕೆ ನಿಯೋಜಿಸಬೇಕೆಂದು ಮನವಿ ಮಾಡಿದರು. ಆದರೆ ಈ ವಾದವನ್ನು ಸುಪ್ರೀಂಕೋರ್ಟ್ ಒಪ್ಪಲಿಲ್ಲ.
"ಕ್ಷಮಿಸಿ, ನಾವು ಎರಡೂ ಕಡೆ ಸಮತೋಲನ ಮಾಡಬೇಕಿದೆ. ಯಾವುದೇ ಒಬ್ಬರ ಕಡೆಗೆ ನಾವು ಒಲವು ತೋರಿಸುವಂತಿಲ್ಲ" ಎಂದು ಸಿಜೆಐ ಹೇಳಿದರು.