ಚೆನ್ನೈ(ತಮಿಳುನಾಡು): ಮೇಕೆದಾಟು ಯೋಜನೆ ವಿಚಾರವಾಗಿ ಕರ್ನಾಟಕ - ತಮಿಳುನಾಡಿನ ಮಧ್ಯೆ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಇದೀಗ ಉಭಯ ರಾಜ್ಯದ ಬಿಜೆಪಿ ಘಟಕಗಳ ನಡುವೆ ಮಾತಿನ ಸಮರ ಜೋರಾಗಿ ನಡೆಯುತ್ತಿದೆ. ಇದೇ ವಿಚಾರವಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಇಂದು ಕೂಡ ಹೇಳಿಕೆ ನೀಡಿದ್ದಾರೆ.
ವರದಿಗಾರರು ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅಣ್ಣಾಮಲೈ, 1956ರ ಕಾಯ್ದೆ ಪ್ರಕಾರ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಕೈಗೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಖಂಡಿತವಾಗಿ ಅನುಮತಿ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ವಿಚಾರದಲ್ಲಿ ಸಂಸತ್ ಸದಸ್ಯ ದಯಾನಿಧಿ ಮಾರನ್ ಕೂಡ ಮಾಹಿತಿ ತಿಳಿದುಕೊಂಡು ಮಾತನಾಡಲಿ ಎಂದಿದ್ದಾರೆ.
ಕರ್ನಾಟಕ ಮೇಕೆದಾಟು ಯೋಜನೆ ಕೈಬಿಡುವಂತೆ ಅಣ್ಣಾಮಲೈ ಆಗಸ್ಟ್ 5ರಿಂದ ತಂಜಾವೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ. ಈ ವಿಚಾರವಾಗಿ ಈಗಾಗಲೇ ಮಾತನಾಡಿರುವ ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರು ಉಪವಾಸವಾದರೂ ಕೂಡಲಿ, ಊಟವಾದ್ರೂ ಮಾಡಲಿ. ಮೇಕೆದಾಟು ಯೋಜನೆ ನಿರ್ಮಾಣ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿರಿ: ಯಾರಾದರೂ ಉಪವಾಸ ಕೂರಲಿ..ಮೇಕೆದಾಟು ಮಾಡಿಯೇ ತೀರುತ್ತೇವೆ: ಅಣ್ಣಾಮಲೈಗೆ ಬೊಮ್ಮಾಯಿ ತಿರುಗೇಟು
ಇದೇ ವಿಚಾರವಾಗಿ ಈಗಾಗಲೇ ಎರಡು ರಾಜ್ಯದ ನಿಯೋಗ ಹಾಗೂ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಲಶಕ್ತಿ ಸಚಿವ ಶೇಖಾವತ್ ಅವರಿಗೂ ಭೇಟಿ ಮಾಡಿ, ಮನವಿ ಸಲ್ಲಿಕೆ ಮಾಡಿವೆ.