ಹರಿದ್ವಾರ (ಉತ್ತರಾಖಂಡ್): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉತ್ತರಾಖಂಡ್ ಪ್ರವಾಸದಲ್ಲಿದ್ದಾರೆ. ಇಲ್ಲಿನ ಪ್ರಸಿದ್ಧ ತೀರ್ಥ ಕ್ಷೇತ್ರಗಳಾದ ಚಾರ್ಧಾಮ್ಗಳಿಗೆ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಅವರು ಭೇಟಿ ನೀಡಿದ್ದಾರೆ.
ಪುರಾಣ ಪ್ರಸಿದ್ಧ ಬದ್ರಿನಾಥ್, ಕೇದಾರನಾಥ ಕ್ಷೇತ್ರಗಳಿಗೆ ಭೇಟಿ ನೀಡಿದ ಬಳಿಕ ಅವರು ಹರಿದ್ವಾರ ತಲುಪಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡಿದ್ದಾರೆ. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಡಿಕೆಶಿ, ಪ್ರತಿಯೊಬ್ಬರಿಗೂ ಗಂಗಾ ಮಾತೆ ಒಳ್ಳೆಯದು ಮಾಡಲಿ ಎಂದು ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ ಎಂದರು.
ಇದೇ ವೇಳೆ ರಾಜಕೀಯ ವಿಚಾರವಾಗಿ ಮಾತನಾಡಿದ ಡಿಕೆಶಿ, ನನ್ನ ವಿರುದ್ಧ ಯಾವುದೇ ಕೇಸ್ಗಳು ಇಲ್ಲ. ಆದರೆ, ರಾಜಕೀಯ ದುರುದ್ದೇಶಕ್ಕಾಗಿ ನನ್ನ ಗುರಿಯಾಗಿಸಿಕೊಳ್ಳಲಾಗಿದೆ. ನನ್ನನ್ನು ಆ ದೇವರು ಮತ್ತು ದೇಶದ ಕಾನೂನು ರಕ್ಷಣೆ ಮಾಡುತ್ತಿದೆ ಎಂದು ನಂಬಿದ್ದೇನೆ ಎಂದು ಹೇಳಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಕಳೆದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಇಲ್ಲಿಗೆ ರಾಜಕೀಯ ಮಾಡಲು ಬಂದಿಲ್ಲ. ನನ್ನೂರಿನಲ್ಲಿ ರಾಜಕೀಯ ಮಾಡುತ್ತೇನೆ. ಆದರೆ, ಇಂದು ದೇಶ ಆರ್ಥಿಕವಾಗಿ ಸಾಕಷ್ಟು ದುರ್ಬಲಗೊಂಡಿದೆ. ರೈತರು, ಕೂಲಿ ಕಾರ್ಮಿಕರು, ಸಾಮಾನ್ಯ ಜನರ ಬದುಕಿನಲ್ಲಿ ಈ ಸರ್ಕಾರ ಯಾವುದೇ ರೀತಿಯಾದ ಬದಲಾವಣೆ ತಂದಿಲ್ಲ. ಬೆಲೆ ಏರಿಕೆಯಿಂದ ಪ್ರತಿಯೊಬ್ಬರು ಸಮಸ್ಯೆಗೆ ಸಿಲುಕಿದ್ದು, ಜನ ಸಾಮಾನ್ಯರನ್ನು ನಿಸ್ಸಹಾಯಕರನ್ನಾಗಿ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: 'ಹೊರಟ್ಟಿ ಅನುಭವಕ್ಕೆ ತಕ್ಕ ಅವಕಾಶ': ಸಭಾಪತಿ ಸ್ಥಾನದ ಸುಳಿವು ನೀಡಿದ ಸಿಎಂ