ನವದೆಹಲಿ: ಕರ್ನಾಟಕ ಮತ್ತು ತೆಲಂಗಾಣದಲ್ಲಿ ಪಕ್ಷದ ಗೆಲುವಿಗೆ ಕಾರಣರಾದ ಕಾಂಗ್ರೆಸ್ನ ಚುನಾವಣಾ ತಂತ್ರಗಾರ ಸುನಿಲ್ ಕನುಗೋಲು ಅವರು 2024 ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪಾತ್ರ ವಹಿಸುವುದಿಲ್ಲ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಪ್ರಶಾಂತ್ ಕಿಶೋರ್ ನಂತರ, ಕನುಗೋಲು ಅವರು ಪಕ್ಷದ ಸಾರ್ವತ್ರಿಕ ಚುನಾವಣಾ ಪ್ರಚಾರದೊಂದಿಗೆ ಸಂಬಂಧ ಹೊಂದಿರದ ಎರಡನೇ ಉನ್ನತ ಮಟ್ಟದ ಚುನಾವಣಾ ತಂತ್ರಗಾರರಾಗಿದ್ದಾರೆ.
ಕನುಗೋಲು ಕಾಂಗ್ರೆಸ್ನ 2024 ರ ಟಾಸ್ಕ್ ಫೋರ್ಸ್ನ ಭಾಗವಾಗಿದ್ದರು. ಹೊಸ ಬದಲಾವಣೆಗಳ ಪ್ರಕಾರ ಅವರು ಈಗ ಪಕ್ಷದ ಹರಿಯಾಣ ಮತ್ತು ಮಹಾರಾಷ್ಟ್ರ ಪ್ರಚಾರದ ಮೇಲೆ ಮಾತ್ರ ಗಮನ ಹರಿಸಲಿದ್ದಾರೆ. ಅವರು ಈಗಾಗಲೇ ಈ ಎರಡು ರಾಜ್ಯಗಳಲ್ಲಿ ತಂಡಗಳನ್ನು ಹೊಂದಿರುವುದರಿಂದ ಬದಲಾವಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಈ ಎರಡೂ ರಾಜ್ಯಗಳಲ್ಲಿ ಈ ವರ್ಷ ಚುನಾವಣೆ ನಡೆಯಲಿವೆ.
ಕನುಗೋಲು ಅವರು ಕಾಂಗ್ರೆಸ್ ನೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ ಎಂದು ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅವರು ಕ್ಯಾಬಿನೆಟ್ ದರ್ಜೆಯೊಂದಿಗೆ ಕರ್ನಾಟಕ ಮುಖ್ಯಮಂತ್ರಿಗಳ ಸಲಹೆಗಾರರಾಗಿದ್ದು, ಕರ್ನಾಟಕದಲ್ಲಿ ತಮ್ಮ ಕೆಲಸ ಮುಂದುವರಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
2023 ರ ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಕಳಪೆ ಪ್ರದರ್ಶನವು ಕಾಂಗ್ರೆಸ್ಗೆ ಕನುಗೋಲು ಅವರ ತಂತ್ರಗಾರಿಕೆ ಎಷ್ಟು ಅನಿವಾರ್ಯ ಎಂಬುದನ್ನು ಎತ್ತಿ ತೋರಿಸಿದೆ. ಚುನಾವಣೆಯ ಸಮಯದಲ್ಲಿ ಕನುಗೋಲು ಈ ಎರಡೂ ರಾಜ್ಯಗಳ ಕಾಂಗ್ರೆಸ್ ನಾಯಕರೊಂದಿಗೆ ಆರಂಭಿಕ ಮಾತುಕತೆ ನಡೆಸಿದ್ದರು. ಆದರೆ, ಕಮಲ್ ನಾಥ್ ಅಥವಾ ಅಶೋಕ್ ಗೆಹ್ಲೋಟ್ ಅವರ ಬೇಡಿಕೆಗಳಿಗೆ ಒಪ್ಪಲಿಲ್ಲ. ನಂತರ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು ಇತಿಹಾಸ. ಕನುಗೋಲು ಅವರಿಗೆ ಮುಕ್ತ ಅವಕಾಶ ನೀಡಿದ್ದರಿಂದಲೇ ಕಾಂಗ್ರೆಸ್ ತೆಲಂಗಾಣ ಮತ್ತು ಕರ್ನಾಟಕಗಳಲ್ಲಿ ಜಯಭೇರಿ ಬಾರಿಸಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರೊಂದಿಗೆ ಕೆಲಸ ಮಾಡಿರುವ ಸುನಿಲ್ ಕನುಗೋಲು, 2014 ರಲ್ಲಿ ನರೇಂದ್ರ ಮೋದಿಯವರ ವಿಜಯಶಾಲಿ ಚುನಾವಣೆ ಸೇರಿದಂತೆ ಹಲವಾರು ಮಹತ್ವದ ರಾಜಕೀಯ ಅಭಿಯಾನಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕರ್ನಾಟಕದವರಾದ ಕನುಗೋಲು ಚೆನ್ನೈನಲ್ಲಿ ಬೆಳೆದರು. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಂಘಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ಕಾರ್ಯತಂತ್ರವು ಪ್ರಮುಖ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ನ ವ್ಯಾಪ್ತಿ ಮತ್ತು ಸಾರ್ವಜನಿಕರೊಂದಿಗಿನ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸಿತು.
ಇದನ್ನೂ ಓದಿ : ಯುವಜನರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ನೀಡಲು ಯುವನಿಧಿ ಕೊಟ್ಟಿದ್ದೇವೆ: ಡಿಸಿಎಂ ಡಿ ಕೆ ಶಿವಕುಮಾರ್