ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಕುಟುಂಬವೊಂದು ಮೃತ ವ್ಯಕ್ತಿಯನ್ನು ಸುಮಾರು ಒಂದೂವರೆ ವರ್ಷಗಳ ಕಾಲ ಮನೆಯಲ್ಲೇ ಇರಿಸಿಕೊಂಡಿರುವುದು ಬಯಲಾಗಿದೆ.
ಮೃತರನ್ನು ವಿಮಲೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ಆದಾಯ ತೆರಿಗೆ ಇಲಾಖೆ ಉದ್ಯೋಗಿಯಾಗಿದ್ದರು. ಕಳೆದ ವರ್ಷ ಏಪ್ರಿಲ್‌ನಲ್ಲಿ ಕೋವಿಡ್-19ನಿಂದ ವಿಮಲೇಶ್ ಕುಮಾರ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ವಿಮಲೇಶ್ ಕುಮಾರ್ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ಕುಟುಂಬದವರು ನಂಬಿ, ಶವವನ್ನು ಮನೆಯಲ್ಲೇ ಇರಿಸಿಕೊಂಡಿದ್ದರು. ಶುಕ್ರವಾರ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡವು ಮನೆಗೆ ತೆರಳಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಉದ್ಯೋಗಿ ವಿಮಲೇಶ್ ಕುಮಾರ್ ಕಳೆದ ಒಂದೂವರೆ ವರ್ಷಗಳಿಂದ ಕಚೇರಿಗೆ ಹಾಜರಾಗುತ್ತಿಲ್ಲ. ಅವರು ಎಲ್ಲಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಆದಾಯ ತೆರಿಗೆ ಇಲಾಖೆ ಸೂಚಿಸಿತ್ತು. ಅಂತೆಯೇ, ಈ ಬಗ್ಗೆ ತಿಳಿದುಕೊಳ್ಳಲು ಮುಖ್ಯ ವೈದ್ಯಾಧಿಕಾರಿಗಳು ತಂಡವನ್ನು ರಚಿಸಿದ್ದರು.
ಆಗ ಆರೋಗ್ಯ ಇಲಾಖೆಯ ತಂಡವು ವಿಮಲೇಶ್ ಕುಮಾರ್ ಮನೆಗೆ ತಲುಪಿದಾಗ ಅವರು ಕೋಮಾದಲ್ಲಿ ಜೀವಂತವಾಗಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಆದರೆ, ಇಲ್ಲ ಅವರು ಬಹಳ ದಿನಗಳ ಹಿಂದೆಯೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳ ತಂಡ ತಿಳಿಸಿದೆ ಅಂತಾ ಎಸಿಎಂಒ ಒ.ಪಿ. ಗೌತಮ್ ಮಾಹಿತಿ ನೀಡಿದರು.
ಆದರೆ, ಇಲ್ಲಿಯವರೆಗೆ ಕುಟುಂಬಸ್ಥರು ವಿಮಲೇಶ್ ಕುಮಾರ್ ಬದುಕಿದ್ದಾರೆ ಎಂದು ತಿಳಿದು ಶವ ಸಂಸ್ಕಾರ ಮಾಡಿರಲಿಲ್ಲ. ಅಲ್ಲದೇ, ಪತಿ ಕೋಮಾದಿಂದ ಹೊರ ಬರಲಿ ಎಂದು ಪ್ರತಿದಿನ ಬೆಳಗ್ಗೆ ಕುಮಾರ್ ಅವರ ದೇಹಕ್ಕೆ ಪತ್ನಿ ಗಂಗಾಜಲ ಸಿಂಪಡಿಸುತ್ತಿದ್ದರು. ಅಲ್ಲದೇ, ನೆರೆಹೊರೆಯವರಿಗೂ ವಿಮಲೇಶ್ ಕುಮಾರ್ ಕೋಮಾದಲ್ಲಿದ್ದಾರೆ ಎಂದು ಕುಟುಂಸ್ಥರು ತಿಳಿಸಿದ್ದರು. ಆಗಾಗ್ಗೆ ಆಕ್ಸಿಜನ್ ಸಿಲಿಂಡರ್ಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಸದ್ಯ ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದು, ಅದನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವಿಮಲೇಶ್ ಅವರ ಪತ್ನಿ ಮಾನಸಿಕವಾಗಿ ಬಳಲುತ್ತಿರುವಂತೆ ತೋರುತ್ತದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಕಾನ್ಪುರದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಆಕೆ ವಯಸ್ಸು 26.. ಮದುವೆ 6... 7ನೇ ಮದುವೆಯಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದ ಗಂಡ!