ಕಣ್ಣೂರು (ಕೇರಳ): ಶಾಲಾ ತರಗತಿಯಲ್ಲೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಣೂರಿನ ಶಿಕ್ಷಕನಿಗೆ ಇಲ್ಲಿನ ತಳಿಪರಂಬ ಪೋಕ್ಸೊ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಿತು. ಅಪರಾಧಿ ಶಿಕ್ಷಕನಿಗೆ 79 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ಹಾಗೂ 2.7 ಲಕ್ಷ ರೂ. ದಂಡ ವಿಧಿಸಿ ಆದೇಶಿಸಲಾಗಿದೆ. ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗೋವಿಂದನ್ ನಂಬೂದರಿ ಪ್ರಕರಣದಲ್ಲಿ ದೋಷಿಯಾಗಿದ್ದಾನೆ.
ಪ್ರಕರಣದ ವಿವರ: 2013ರ ಜೂನ್ ಮತ್ತು 2014ರ ಜನವರಿ ತಿಂಗಳ ಆರು ತಿಂಗಳ ಅವಧಿಯಲ್ಲಿ ಶಾಲಾ ತರಗತಿಯಲ್ಲೇ ಐವರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗುರುತರ ಆರೋಪ ಗೋವಿಂದನ್ ನಂಬೂದರಿ ಮೇಲಿತ್ತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಈ ಐದು ಪ್ರಕರಣಗಳ ಪೈಕಿ ನಾಲ್ಕು ಪ್ರಕರಣಗಳಲ್ಲಿ ಶಿಕ್ಷಕನ ವಿರುದ್ಧ ಆರೋಪ ಸಾಬೀತಾಗಿದೆ. ಇನ್ನೊಂದು ಪ್ರಕರಣದಲ್ಲಿ ಆತ ಖುಲಾಸೆಗೊಂಡಿದ್ದಾನೆ. ಇದೀಗ ನಾಲ್ಕು ಪ್ರಕರಣಗಳ ಶಿಕ್ಷೆಯ ಪ್ರಮಾಣವನ್ನು ನ್ಯಾ.ಪಿ.ಮುಜೀಬ್ ಪ್ರಕಟಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ತಕ್ಷಣವೇ ಶಿಕ್ಷಕನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಪ್ರಕರಣದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಶಾಲೆಯ ಹೆಲ್ಪ್ ಡೆಸ್ಕ್ ಉಸ್ತುವಾರಿ ಶಿಕ್ಷಕಿ ಕೂಡ ಸಿಲುಕಿಕೊಂಡಿದ್ದರು. ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಮಾಹಿತಿ ಇದ್ದರೂ ಮುಚ್ಚಿಟ್ಟ ಆರೋಪ ಈ ಇಬ್ಬರ ಮೇಲಿದೆ. ಆದರೆ ಇವರನ್ನು ಖುಲಾಸೆಗೊಳಿಸಲಾಗಿದೆ.
ಇದನ್ನೂ ಓದಿ: ಹೈದರಾಬಾದ್ ಜ್ಯುಬಿಲಿ ಹಿಲ್ಸ್ ಗ್ಯಾಂಗ್ರೇಪ್ ಪ್ರಕರಣ: ಫೋಟೊ ಡಿಲೀಟ್ ಮಾಡುವಂತೆ ದೂರು