ಹೈದರಾಬಾದ್: ನಟ, ರಾಜಕಾರಣಿ ಕಮಲ್ ಹಾಸನ್ ನಟನೆಯ ಚಿತ್ರ ವಿಕ್ರಮ್ಗೋಸ್ಕರ ಅವರು ಭರದ ಪ್ರಚಾರ ಕಾರ್ಯ ನಡೆಸುತ್ತಿದ್ದು, ಇಂದು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದರು. ಈ ವೇಳೆ ಬಾಲಿವುಡ್ ವರ್ಸಸ್ ಸೌತ್ ಚರ್ಚೆ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಡೋಸನ್ ಒಂದು ಪ್ಯಾನ್ ಇಂಡಿಯಾ ಚಿತ್ರ, ಮೊಘಲ್ ಎ ಅಜಮ್ ಕೂಡ ನನಗೆ ಪ್ಯಾನ್ ಇಂಡಿಯಾ ಚಿತ್ರವಾಗಿದೆ. ನಮ್ಮ ದೇಶ ವೈಶಿಷ್ಟ್ಯತೆಯಿಂದ ಕೂಡಿದ್ದು, ಅಮೆರಿಕಗಿಂತಲೂ ಭಿನ್ನವಾಗಿದೆ. ನಾವು ತುಂಬಾ ವಿಭಿನ್ನರು. ಬೇರೆ ಬೇರೆ ಭಾಷೆ ಮಾತನಾಡುತ್ತೇವೆ ಆದರೆ ಒಗ್ಗಟ್ಟಾಗಿದ್ದೇವೆ ಅದು ಈ ದೇಶದ ಸೌಂದರ್ಯ ಎಂದು ಹೇಳಿರುವ ನಟ ಕಮಲ್ ಹಾಸನ್ ನಾನೋರ್ವ ಭಾರತೀಯ ಎಂದು ಹೇಳಿಕೊಂಡಿದ್ದಾರೆ.
ಪತ್ರಕರ್ತನೋರ್ವ ಬಾಲಿವುಡ್ ವರ್ಸಸ್ ಸೌತ್ ವಿಚಾರವಾಗಿ ಪ್ರಶ್ನೆ ಕೇಳಿದ್ದು, ಈ ವೇಳೆ ಪ್ರತಿಕ್ರಿಯೆ ನೀಡಿರುವ ಕಮಲ್ ಹಾಸನ್, ಪ್ಯಾನ್ ಇಂಡಿಯಾ ಚಿತ್ರ ಈ ಹಿಂದಿನಿಂದಲೂ ಬರುತ್ತಿವೆ. ಈ ಹಿಂದೆ ಶಾಂತಾರಾಮ್ ಜಿ ಅನೇಕ ಪ್ಯಾನ್ ಇಂಡಿಯಾ ಚಿತ್ರ ಮಾಡಿದ್ದಾರೆ.
ಅವರ ಪಡೋಸನ್, ಮೊಘಲ್ ಎ ಅಜಮ್ ಕೂಡ ಆ ಸಾಲಿಗೆ ಸೇರಿಕೊಳ್ಳುತ್ತವೆ. ಪ್ಯಾನ್ ಇಂಡಿಯಾ ಚಿತ್ರ ಎಂಬುದು ಹೊಸದೇನೂ ಅಲ್ಲ. ಯಾವಾಗಲೂ ಇಂತಹ ಚಿತ್ರಗಳು ತಯಾರುಗೊಳ್ಳುತ್ತಿರುತ್ತವೆ ಎಂದರು. ಇದೀಗ ನಾವು ತಯಾರು ಮಾಡಿರುವ ವಿಕ್ರಮ್ ಕೂಡ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದೆ ಎಂದು ಹೇಳಿಕೊಂಡರು.
ಇದನ್ನೂ ಓದಿ: ತಮಿಳುನಾಡಿನಲ್ಲಿ ನಮೋ ರೋಡ್ ಶೋ.. ಮೋದಿ.. ಮೋದಿ ಎಂದು ಜೈಕಾರ ಹಾಕಿದ ಅಪಾರ ಜನಸ್ತೋಮ
ನಾವು ಯಾವಾಗಲೂ ಪ್ಯಾನ್ ಇಂಡಿಯಾ ಚಿತ್ರ ತಯಾರಿಸುತ್ತೇವೆ. ಆ ಚಿತ್ರ ಎಷ್ಟು ಉತ್ತಮವಾಗಿದೆ ಎಂಬುದು ಜನರ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿಯೊಬ್ಬರು ಅದನ್ನ ನೋಡಲು ಬಯಸಿದರೆ, ಖಂಡಿತವಾಗಿ ಪ್ಯಾನ್ ಇಂಡಿಯಾ ಚಿತ್ರವಾಗುತ್ತದೆ. ಮಲಯಾಳಂ ಚೆಮ್ಮೀನ್ ಕೂಡ ಪ್ಯಾನ್ ಇಂಡಿಯಾ ಚಿತ್ರವಾಗಿತ್ತು ಎಂದರು.
ಸೌತ್ ಇಂಡಸ್ಟ್ರೀಯ ಆರ್ಆರ್ಆರ್ ಮತ್ತು ಕೆಜಿಎಫ್ ಚಾಪ್ಟರ್ 2 ಯಶಸ್ಸಿನ ನಂತರ ಹಿಂದಿ vs ಸೌತ್ ಎಂಬ ಚರ್ಚೆ ಜೋರಾಗಿ ಕೇಳಿ ಬರಲು ಶುರುವಾಗಿದ್ದು, ಇದರ ಬೆನ್ನಲ್ಲೇ ಕಮಲ್ ಹಾಸನ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಇದೇ ವೇಳೆ, ನಾನು ಭಾರತೀಯ. ತಾಜ್ ಮಹಲ್ ನನ್ನದು, ಮಧುರೈ ದೇವಸ್ಥಾನ ನಿಮ್ಮದು, ಕನ್ಯಾಕುಮಾರಿ ನಿಮ್ಮದು, ಕಾಶ್ಮೀರವೂ ನನ್ನದು ಎಂದಿದ್ದಾರೆ.
ವಿಕ್ರಮ್ ಚಿತ್ರದಲ್ಲಿ ಕಮಲ್ ಹಾಸನ್ ನಟನಾಗಿ ಕಾಣಿಸಿಕೊಂಡಿದ್ದು, ವಿಜಯ್ ಸೇತುಪತಿ ಮತ್ತು ಫಹದ್ ಫಾಸಿನ್ ಇದ್ದಾರೆ. ಅತಿಥಿ ಪಾತ್ರದಲ್ಲಿ ಸೂರ್ಯ ನಟನೆ ಮಾಡಿದ್ದು, ಜೂನ್ 3ರಂದು ತೆರೆ ಕಾಣಲಿದೆ.