ಕಡಪ(ಆಂಧ್ರಪ್ರದೇಶ): ಇಬ್ಬರು ಸ್ನೇಹಿತೆಯರು ಸೋಮವಾರ ರೈಲು ಹಳಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಆಂಧ್ರಪ್ರದೇಶ ಕಡಪ ರೈಲು ನಿಲ್ದಾಣ ವ್ಯಾಪ್ತಿಯ ಭಾಕರಪೇಟ ಎಂಬಲ್ಲಿ ನಡೆದಿತ್ತು. ಸ್ನೇಹಿತೆಯರಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಅವರು ಕಡಪ ನಗರಕ್ಕೆ ಬಂದು ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು? ಎಂಬ ಪ್ರಶ್ನೆಗಳು ಕಾಡುತ್ತಿವೆ. ಪ್ರಾಥಮಿಕ ತನಿಖೆಯಲ್ಲಿ ಇನ್ನಷ್ಟು ಮಾಹಿತಿಗಳು ಹೊರಬಿದ್ದಿವೆ.
ಪ್ರಾಥಮಿಕ ತನಿಖೆಯ ಮೂಲಕ ಸಿಕ್ಕ ಮಾಹಿತಿಯಂತೆ.. ಪೂಜಿತಾ (19) ಮತ್ತು ಕಲ್ಯಾಣಿ (19) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಮೃತಪಟ್ಟ ಯಾರೂ ಸಹ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಇಬ್ಬರೂ ಸ್ನೇಹಿತೆಯರು ಎಂದು ಅವರು ಮೃತಪಟ್ಟ ನಂತರವೇ ಅವರವರ ಕುಟುಂಬಗಳಿಗೆ ಗೊತ್ತಾಗಿದೆಯಂತೆ.. ಕರೆಗಳ ಮಾಹಿತಿ ಪರಿಶೀಲನೆ ನಂತರ ಆತ್ಮಹತ್ಯೆಗೆ ಕಾರಣ ಹೊರಬರಬಹುದು ಎಂಬುದು ಪೊಲೀಸರ ಅಭಿಪ್ರಾಯ.
ನಾಪತ್ತೆಯಾದ ಮೂವರೊಂದಿಗೆ ಲಿಂಕ್? : ಸೋಮವಾರದಂದು ಅನಂತಪುರದಲ್ಲಿ ಮತ್ತೆ ಮೂವರು ಯುವತಿಯರು ನಾಪತ್ತೆಯಾಗಿದ್ದಾರೆ. ಮೂವರು ಎಲ್ಲಿದ್ದಾರೆ ಎಂಬುದು ಗೊತ್ತಾಗಿದೆ. ನಾಪತ್ತೆಯಾದ ಮೂವರಿಗೂ ಮತ್ತು ಆತ್ಮಹತ್ಯೆ ಮಾಡಿಕೊಂಡ ಇಬ್ಬರಿಗೂ ಸಂಬಂಧ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂದಹಾಗೆ ಪೂಜಿತಾ ಮತ್ತು ಕಲ್ಯಾಣಿ ಇಬ್ಬರೂ ಕೂಡಾ ಅನಂತಪುರ ಜಿಲ್ಲೆಯವರೇ ಆಗಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಶಾಲೆಗೆ ಹೋಗಿದ್ದ ಶಿಕ್ಷಕ ರಸ್ತೆ ಬದಿ ಅನುಮಾನಾಸ್ಪದ ಸಾವು..!
ಸ್ಕಾಲರ್ಶಿಪ್ ಕುರಿತ ಸ್ವಲ್ಪ ಕೆಲಸವಿದೆ ಎಂದು ಕೆಲಸವಿದೆ ಎಂದು ಕಲ್ಯಾಣಿ ಅನಂತಪುರದ ತಾಡಿಪತ್ರಿಯಿಂದ ತನ್ನ ಸ್ವಂತ ಊರಾದ ಕಮಲಪಾಡು ಸೆಕ್ರೆಟರಿಯೇಟ್ಗೆ ತೆರಳುತ್ತಿರುವುದಾಗಿ ಸ್ನೇಹಿತೆಯರ ಬಳಿ ಹೇಳಿಕೊಂಡಿದ್ದಳು. ಪೂಜಿತಾ ಕಾಲೇಜಿಗೆ ತೆರಳುವುದಾಗಿ ಹೇಳಿದ್ದಳು. ಇವರಿಬ್ಬರು ಸೋಮವಾರ ಬೆಳಗ್ಗೆ 9.42ಕ್ಕೆ ತಾಡಿಪತ್ರಿಯಲ್ಲಿ ಕರ್ನಾಟಕ ಸಾರಿಗೆ ಬಸ್ ಹತ್ತಿ ಕಡಪದಲ್ಲಿ ಇಳಿದುಕೊಂಡಿದ್ದರು. ನಂತರ ಸೆಲ್ಫಿ ತೆಗೆದುಕೊಂಡಿದ್ದ ಇವರು ಮಧ್ಯಾಹ್ನ 1.30ರ ವೇಳೆಗೆ ಕಡಪ ರೈಲ್ವೆ ನಿಲ್ದಾಣದಲ್ಲಿ ಸುತ್ತಾಡುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಲೋಕೋಪೈಲಟ್ನನ್ನು ಯಾಮಾರಿಸಿದ್ದರು: ಹಳಿಯ ಮೇಲೆ ನಡೆದುಕೊಂಡು ರಾಜಂಪೇಟೆಯ ಕಡೆಗೆ ತೆರಳಿದ್ದ ಅವರಿಗೆ ಅಲ್ಲಿದ್ದ ಸಿಬ್ಬಂದಿ 'ಇಲ್ಲಿಗೆ ಬರಬೇಡಿ' ಎಂದು ಹೇಳಿದ್ದರು. ನಂತರ ಆಟೋ ಹತ್ತಿ ಎರ್ರಮುಕ್ಕಪಲ್ಲೆ ಬಳಿಯ ರೈಲು ಹಳಿ ಹತ್ತಿರಕ್ಕೆ ಬಂದ ಪೂಜಿತಾ ಮತ್ತು ಕಲ್ಯಾಣಿ ಹಳಿಗಳ ಮೇಲೆ ನಡೆಯುತ್ತಿದ್ದರು. ಎದುರಿಗೆ ಬಂದ ಗೂಡ್ಸ್ ರೈಲಿಗೆ ಸಿಲುಕುವುದು ಅವರ ಯೋಚನೆಯಾಗಿತ್ತು. ಆದರೆ ದೂರದಿಂದ ಇದನ್ನು ನೋಡಿದ ಗೂಡ್ಸ್ ರೈಲಿನ ಲೊಕೋ ಪೈಲಟ್ ರೈಲಿನ ವೇಗವನ್ನು ಕಡಿಮೆ ಮಾಡಿದ್ದನು. ಈ ವೇಳೆ ಹಳಿಗಳಿಂದ ಕೆಳಗೆ ಇಳಿದ ಪೂಜಿತಾ ಮತ್ತು ಕಲ್ಯಾಣಿ ರೈಲು ಹತ್ತಿರಕ್ಕೆ ಬಂದಾಗ ಮತ್ತೆ ರೈಲು ಹಳಿಗಳ ಮೇಲೆ ಜಿಗಿದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುವ ಮಾತು.
ಕಲ್ಯಾಣಿ ಸ್ಥಳದಲ್ಲೇ ಮೃತಪಟ್ಟರೆ, ಪೂಜಿತಾ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾರೆ. ಇಬ್ಬರ ಸಾವಿಗೂ ಕಾರಣ ಇನ್ನೂ ತಿಳಿದುಬಂದಿಲ್ಲ. ತನ್ನೂರಿಗೆ ಹೊರಡುತ್ತೇನೆ ಎಂದಿದ್ದ ಕಲ್ಯಾಣಿ ಕಡಪಕ್ಕೆ ಬಂದಿದ್ದು ಏಕೆ? ಎಂಬುದು ಇನ್ನೂ ನಿಗೂಢವಾಗಿದೆ.
ಪೂಜಿತಾ ಕಳೆದ ಎರಡು ತಿಂಗಳಿಂದ ಒಂಟಿತನದಿಂದ ಬಳಲುತ್ತಿದ್ದಳು. ಮನೆಯಲ್ಲಿ ಯಾವುದೇ ಜಗಳ ಇರಲಿಲ್ಲ. ಕಾಲೇಜಿನಲ್ಲಿ ಏನಾದರೂ ಸಮಸ್ಯೆಗಳಿದ್ದವೇ ಎಂಬುದು ನನಗೆ ತಿಳಿದಿರಲಿಲ್ಲ. ಕಲ್ಯಾಣಿ ಮತ್ತು ಪೂಜಿತಾ ಅವರಿಬ್ಬರೂ ಸ್ನೇಹಿತರೆಂದು ನಮಗೆ ಈವರೆಗೆ ತಿಳಿದಿರಲಿಲ್ಲ ಎಂದು ಪೂಜಿತಾ ಸಹೋದರ ನಾಗಾರ್ಜುನ ಹೇಳಿದ್ದಾನೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸಿಬ್ಬಂದಿಯನ್ನು ತಾಡಿಪತ್ರಿಗೆ ಕಳುಹಿಸಿ ಅವರು ಓದುತ್ತಿರುವ ಕಾಲೇಜಿನಲ್ಲಿ ತನಿಖೆ ನಡೆಸುತ್ತಿದ್ದೇವೆ. ಕರೆ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಕಡಪ ರೈಲ್ವೆ ಸಬ್ ಇನ್ಸ್ಪೆಕ್ಟರ್ ರಾಜು ತಿಳಿಸಿದ್ದಾರೆ.