ಹೈದರಾಬಾದ್: ತೆಲಂಗಾಣದ ಪಶುವೈದ್ಯೆ ಡಾ. ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ನ್ಯಾಯಮೂರ್ತಿ ಸಿರ್ಪುರ್ಕರ್ ಆಯೋಗದ ತನಿಖೆ ನಡೆಯುತ್ತಿದೆ. ಪ್ರಕರಣ ಕುರಿತಂತೆ ಆಯೋಗವು ಆರ್‌ಟಿಸಿ ಎಂಡಿ, ಸೈಬರಾಬಾದ್ ಮಾಜಿ ಪೊಲೀಸ್ ಆಯುಕ್ತ ಸಿಪಿ ಸಜ್ಜನರ್ ಅವರನ್ನು ಎರಡನೇ ದಿನ ಪ್ರಶ್ನೆ ಕೇಳುತ್ತಿದೆ.
ಆಯೋಗದ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಜ್ಜನರ್ ಉತ್ತರಿಸಿದರು. ಶಂಷಾಬಾದ್ ಡಿಸಿಪಿ ಪ್ರಕಾಶ್ ರೆಡ್ಡಿ ಅವರು ಡಿಸೆಂಬರ್ 6, 2019 ರಂದು ಬೆಳಗ್ಗೆ ಎನ್‌ಕೌಂಟರ್ ಬಗ್ಗೆ ಹೇಳಿದ್ದರು ಎಂದು ಸಜ್ಜನರ್ ಸ್ಪಷ್ಟಪಡಿಸಿದ್ದಾರೆ. ಎನ್‌ಕೌಂಟರ್ ಬಗ್ಗೆ ವಿಷಯ ತಿಳಿದ ನಂತರ ಎನ್‌ಕೌಂಟರ್ ನಡೆದ ಪ್ರದೇಶವಾದ ಚತನ್ಪಲ್ಲಿಗೆ ಹೋಗಿದ್ದಾಗಿ ಸಜ್ಜನರ್ ಆಯೋಗದ ಮುಂದೆ ಹೇಳಿದ್ದಾರೆ.
ತೆಲುಗು ನನ್ನ ಮಾತೃಭಾಷೆಯಲ್ಲ ಹಾಗಾಗಿ ಕೆಲ ತಪ್ಪುಗಳಾಗಿವೆ
ಮರಣೋತ್ತರ ಪರೀಕ್ಷೆಯನ್ನು ಸೈಬರಾಬಾದ್ ಕಮಿಷನರೇಟ್ ವಕೀಲರ ಸೂಚನೆಗಳ ಪ್ರಕಾರ ಕಾರ್ಯನಿರ್ವಾಹಕ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆಸಲಾಯಿತು ಎಂದು ಸಜ್ಜನರ್ ಹೇಳಿದ್ದಾರೆ. ಇನ್ನು ಎನ್‌ಕೌಂಟರ್ ನಡೆದ ಸ್ಥಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪಿಸಲಾದ ಹಲವಾರು ವಿಷಯಗಳ ಬಗ್ಗೆ ಆಯೋಗವು ಸ್ಪಷ್ಟೀಕರಣವನ್ನು ಕೋರಿತು. ಇದಕ್ಕೆ ತೆಲುಗು ತನ್ನ ಮಾತೃಭಾಷೆಯಲ್ಲದ ಕಾರಣ ಆ ಸಮಯದಲ್ಲಿ ತಾವು ಕೆಲವು ಮಾತುಗಳನ್ನು ತಪ್ಪಾಗಿ ಉಚ್ಚಾರಣೆ ಮಾಡಿದ್ದಾಗಿ ಸಜ್ಜನರ್ ಆಯೋಗಕ್ಕೆ ವಿವರಿಸಿದ್ದಾರೆ.
ದಿಶಾ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಆರೋಪಿಗಳ ಬಂಧನ ಮತ್ತು ನಂತರದ ಬಂಧನ ಮತ್ತು ವಿಚಾರಣೆ ಎಲ್ಲವೂ ಶಂಷಾಬಾದ್ ಡಿಸಿಪಿ ಪ್ರಕಾಶ್ ರೆಡ್ಡಿ ಮೇಲ್ವಿಚಾರಣೆಯಲ್ಲಿ ನಡೆಯಿತು. ಪ್ರಕಾಶ್ ರೆಡ್ಡಿ ಪ್ರತಿದಿನ ನಡೆಯುವ ಕಾನ್ಫರೆನ್ಸ್‌ನಲ್ಲಿ ಈ ಪ್ರಕರಣದ ವಿವರಗಳನ್ನು ವಿವರಿಸಿದರು ಎಂದು ಸಜ್ಜನರ್ ಆಯೋಗಕ್ಕೆ ಹೇಳಿದರು. ಆಯೋಗದ ವಕೀಲರು ಸಜ್ಜನರನ್ನು ಮರಣೋತ್ತರ ಪರೀಕ್ಷೆ ಮತ್ತು ಎನ್‌ಕೌಂಟರ್ ನಂತರ ಶವಗಳನ್ನು ಸ್ಥಳಾಂತರಿಸುವ ವಿವರಗಳ ಕುರಿತು ಪ್ರಶ್ನಿಸುತ್ತಿದ್ದಾರೆ.
ಏನಿದು ಡಾ. ದಿಶಾ ಪ್ರಕರಣ?:
2019ರ ಡಿಸೆಂಬರ್ ತಿಂಗಳಿನಲ್ಲಿ ಹೈದರಾಬಾದ್ನ ಪಶುವೈದ್ಯೆ ಡಾ. ದಿಶಾ ರಾತ್ರಿ ಕೆಲಸ ಮುಗಿಸಿ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಶಂಷಾಬಾದ್ನ ಜನನಿಬಿಡ ಪ್ರದೇಶದಲ್ಲಿ ರಾತ್ರಿ ಆಕೆಯ ಸ್ಕೂಟರ್ ಪಂಕ್ಚರ್ ಆಗಿತ್ತು. ಈ ವಿಚಾರವನ್ನು ಆಕೆ ಮನೆಗೆ ಕರೆ ಮಾಡಿ ಹೇಳಿದ್ದರು. ಅಷ್ಟೇ ಅಲ್ಲ, ಪಕ್ಕದಲ್ಲಿ ಲಾರಿ ಚಾಲಕರಿದ್ದಾರೆ ಅವರನ್ನು ನೋಡಿ ನನಗೆ ಭಯವಾಗುತ್ತಿದೆ ಎಂದು ಆಕೆ ಮೊಬೈಲ್ನಲ್ಲಿ ಹೇಳಿದ್ದರು.
ನಂತರ ಆಕೆ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ರಾತ್ರಿ 11 ಗಂಟೆಗೆ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ, ಡಾ. ದಿಶಾ ಮೇಲೆ ಕಾಮ ಪಿಶಾಚಿಗಳು ಗ್ಯಾಂಗ್ ರೇಪ್ ನಡೆಸಿ ಹತ್ಯೆ ಮಾಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ತೆಲಂಗಾಣದ ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ದೇಶಾದ್ಯಾಂತ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದ ಕುರಿತು ನ್ಯಾಯಮೂರ್ತಿ ಸಿರ್ಪುರ್ಕರ್ ಆಯೋಗ ತನಿಖೆ ನಡೆಸುತ್ತಿದೆ.