ಪಾಟ್ನಾ(ಬಿಹಾರ): ಬರೋಬ್ಬರಿ 108 ವರ್ಷಗಳ ಹಿಂದೆ ಕೋರ್ಟ್ನಲ್ಲಿ ದಾಖಲಾಗಿದ್ದ ಭೂ ವಿವಾದ ಪ್ರಕರಣಕ್ಕೆ ಬಿಹಾರದ ಅರ್ರಾ ಸಿವಿಲ್ ಕೋರ್ಟ್ ಇದೀಗ ತೀರ್ಪು ನೀಡಿದೆ. ಈ ಮೂಲಕ ನಾಲ್ಕನೇ ತಲೆಮಾರಿನ ಜನರಿಗೆ ಇದರಿಂದ ನ್ಯಾಯ ಸಿಕ್ಕಿದೆ. ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ದಾಖಲಾಗಿದ್ದ ಆಸ್ತಿ ಸಂಬಂಧದ ವಿವಾದಕ್ಕೆ ಕೊನೆಗೂ ನ್ಯಾಯ ಸಿಕ್ಕಿರುವುದು ಮಾತ್ರ ಸಮಾಧಾನ ನೀಡುವ ವಿಚಾರವಾಗಿದೆ.
ಏನಿದು ಪ್ರಕರಣ?: 1911ರಲ್ಲಿ 9 ಎಕರೆ ಜಮೀನು ಹೊಂದಿದ್ದ ಕೊಯಿಲ್ವಾರ್ ನಿವಾಸಿ ನಾಥುನಿ ಖಾನ್ ನಿಧನರಾಗುತ್ತಾರೆ. ಈ ವೇಳೆ ಆಸ್ತಿ ಹಂಚಿಕೆ ವಿಚಾರವಾಗಿ ಪತ್ನಿ ಜೈತುನ್, ಸಹೋದರಿ ಬೀಬಿ ಬದ್ಲಾನ್ ಹಾಗೂ ಪುತ್ರಿ ಬೀಬಿ ಸಲ್ಮಾ ನಡುವೆ ಜಗಳವಾಗುತ್ತದೆ. ಈ ಪ್ರಕರಣ 1914ರಲ್ಲಿ ಕೋರ್ಟ್ ಮೆಟ್ಟಿಲೇರುತ್ತದೆ.
1931ರ ಫೆಬ್ರವರಿ ತಿಂಗಳಲ್ಲಿ ಕೋರ್ಟ್ ಮ್ಯಾಜಿಸ್ಟ್ರೇಟ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡುತ್ತಾರೆ. ಇದನ್ನ ಪ್ರಶ್ನೆ ಮಾಡಿ ಕುಟುಂಬ ಮೇಲ್ಮನವಿ ಸಲ್ಲಿಕೆ ಮಾಡಿತು. ಇದರ ಮಧ್ಯೆ ಕೊಯಿಲ್ವಾರ್ ನಿವಾಸಿ ಅಜರ್ ಖಾನ್(ದಿವಂಗತ) ಮೂರು ಎಕರೆ ಜಮೀನು ಕುಟುಂಬಸ್ಥರಿಂದ ಖರೀದಿ ಮಾಡಿದ್ದಾರೆ. ಇದಕ್ಕೂ ಸಂಬಂಧಿಸಿದಂತೆ 1927ರಲ್ಲೂ ಪ್ರಕರಣ ದಾಖಲಾಗಿದೆ. 1992ರಲ್ಲಿ ಇದರ ತೀರ್ಪು ನೀಡಲಾಗಿದ್ದು, ಖರೀದಿ ಮಾಡಿರುವ ಆಸ್ತಿ ಮರು ನೀಡುವಂತೆ ಕೋರ್ಟ್ ಆದೇಶ ನೀಡಿದೆ. ಅಲ್ಲಿನಿಂದಲೂ ವಾದ-ಪ್ರತಿವಾದ ನಡೆಯುತ್ತಲೇ ಬಂದಿದೆ.
ಸುದೀರ್ಘ ಕಾನೂನು ಹೋರಾಟದ ಬಳಿಕ ಇದೀಗ ಕೊಯಿಲ್ವಾರ್ ಮೊಮ್ಮಗನಿಗೆ ಜಮೀನು ನೀಡಲು ತೀರ್ಪು ನೀಡಲಾಗಿದೆ. ಇದರಿಂದ ಅರವಿಂದ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾನೆ. ಜೊತೆಗೆ ಈ ತೀರ್ಪು ನಮ್ಮ ಅಜ್ಜನ ಕಾಲದಲ್ಲೇ ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದಿದ್ದಾರೆ. ವಿಶೇಷವೆಂದರೆ 3 ಎಕರೆ ಜಮೀನು ಖರೀದಿ ಮಾಡಿರುವ ಅಜರ್ ಖಾನ್ ಕುಟುಂಬಸ್ಥರು ಸದ್ಯ ಪಾಕಿಸ್ತಾನದಲ್ಲಿ ವಾಸವಾಗಿದ್ದಾರೆ.
ಇದನ್ನೂ ಓದಿ: ಹೊಸ ಮದರಸಾಗಳಿಗೆ ಸರ್ಕಾರದ ಅನುದಾನ ಕಟ್: ಉತ್ತರಪ್ರದೇಶ ಸರ್ಕಾರದ ಮಹತ್ವದ ನಿರ್ಧಾರ
ಪ್ರಕರಣದ ಬಗ್ಗೆ ಮಾತನಾಡಿರುವ ವಕೀಲ ಸತ್ಯೇಂದ್ರ ನಾರಾಯಣ್ ಸಿಂಗ್, ಈ ಪ್ರಕರಣದಲ್ಲಿ ಮೂರು ತಲೆಮಾರಿನ ವಕೀಲರು ಹೋರಾಡಿದ್ದು, ಇದೀಗ ತೀರ್ಪು ಹೊರಬಿದ್ದಿದೆ ಎಂದಿದ್ದಾರೆ. ಇದರ ಮಧ್ಯೆ ಕೋರ್ಟ್ ಹೈಕೋರ್ಟ್ ಮೆಟ್ಟಿಲೇರಲು ಅವಕಾಶ ನೀಡಿದ್ದು, ಪ್ರಕರಣ ಮುಂದುವರೆಯುವ ಸಾಧ್ಯತೆ ಇದೆ. ಕೋರ್ಟ್ನ ಎಡಿಜೆ ಶ್ವೇತಾ ಕುಮಾರಿ ಸಿಂಗ್ ಇಂದು ತೀರ್ಪು ಪ್ರಕಟಿಸಿದ್ದು, ತೀರ್ಪು ಪ್ರಶ್ನೆ ಮಾಡಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡಲು ಅವಕಾಶವಿದೆ ಎಂದು ತಿಳಿಸಿದ್ದಾರೆ.