ಹೈದರಾಬಾದ್ (ತೆಲಂಗಾಣ): ಭೀಕರ ರಸ್ತೆ ಅಪಘಾತವೊಂದರಲ್ಲಿ ಬೆಂಗಳೂರು ಮೂಲದ ಜೂನಿಯರ್ ಆರ್ಟಿಸ್ಟ್ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಗಚ್ಚಿಬೌಲಿ ಪ್ರದೇಶದಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಡಿವೈಡರ್ ಮಧ್ಯದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಲ್ಲಿ ಬೆಂಗಳೂರಿನ ಮಾನಸ ನಾರಾಯಣ್ (22), ಜಡ್ಚರ್ಲಾ ಪ್ರದೇಶದ ಎಂ.ಮಾನಸ (19) ಹಾಗೂ ವಿಜಯವಾಡದ ಅಬ್ದುಲ್ ರಹೀಮ್ (24) ಎಂಬುವವರು ಸಾವನ್ನಪ್ಪಿದ್ದಾರೆ. ಈತ ಬ್ಯಾಂಕೋದರ ಉದ್ಯೋಗಿ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಸಾಯಿ ಸಿಧು (22) ಎಂಬಾತನ ತಲೆಗೆ ಗಾಯವಾಗಿದ್ದು, ಗಚ್ಚಿಬೌಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಾಯಿ ಸಿಧು ಕೂಡಾ ಜ್ಯೂನಿಯರ್ ಆರ್ಟಿಸ್ಟ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಚ್ಚಿಬೌಲಿ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಜೂನಿಯರ್ ಆರ್ಟಿಸ್ಟ್ ಸಾಯಿ ಸಿಧು ಗಚ್ಚಿಬೌಲಿಯ ಜೆವಿ ಕಾಲೋನಿಯಲ್ಲಿ ವಾಸವಾಗಿದ್ದನು. ಅಬ್ದುಲ್ ರಹೀಮ್ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದು, ಅಮೀರಪೇಟೆಯ ಹಾಸ್ಟೆಲ್ನಲ್ಲಿ ತಂಗಿದ್ದನು. ಅಬ್ದುಲ್ ರಹೀಮ್ ಸಾಯಿ ಸಿಧು ಭೇಟಿಗೆ ಗಚ್ಚಿಬೌಲಿಗೆ ಬಂದಿದ್ದನು.
ಶನಿವಾರ ಬೆಳಗ್ಗೆ ಗಚ್ಚಿಬೌಲಿ ಬಳಿ ಧಾರಾವಾಹಿ ಶೂಟಿಂಗ್ ಇದ್ದ ಕಾರಣ ಶುಕ್ರವಾರ ರಾತ್ರಿ ಸಾಯಿ ಸಿಧು ಮನೆಗೆ ಜೂನಿಯರ್ ಆರ್ಟಿಸ್ಟ್‌ಗಳಾಗಿದ್ದ ಯುವತಿಯರೂ ಬಂದಿದ್ದರು. ನಾಲ್ವರು ಮಧ್ಯರಾತ್ರಿ ಚಹಾ ಕುಡಿಯಲು ಗಚ್ಚಿಬೌಲಿಯಿಂದ ಲಿಂಗಂಪಲ್ಲಿ ಕಡೆಗೆ ಕಾರಿನಲ್ಲಿ ಹೊರಟಿದ್ದು, ಈ ವೇಳೆ ಎಲ್ಲಮ್ಮ ದೇವಸ್ಥಾನ ತಿರುವಿನಲ್ಲಿ ವಾಹನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರು ಚಲಾಯಿಸುತ್ತಿದ್ದ ಅಬ್ದುಲ್ ರಹೀಮ್, ಹಾಗೂ ಯುವತಿಯರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಘಟನೆ ಕುರಿತು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಯಿ ಸಿಧು ಪ್ರತಿಕ್ರಿಯೆ ನೀಡಿದ್ದು, 'ಆ ಮೂವರೂ ರಾತ್ರಿ ನನ್ನ ಮನೆಗೆ ಬಂದಿದ್ದರು. ನಾನು ಮದ್ಯ ಸೇವನೆ ಮಾಡಿರಲಿಲ್ಲ. ಅವರು ಮದ್ಯ ಸೇವನೆ ಮಾಡಿದ್ದರು. ಟೀ ಕುಡಿಯಲು ಅವರು ಮೊದಲಿಗೆ ಒತ್ತಾಯಿಸಿದಾಗ ನಾನು ಬೇಡವೆಂದು ಹೇಳಿದ್ದೆ. ನಂತರ ಅವರ ಒತ್ತಾಯಕ್ಕೆ ಮಣಿದು ಲಿಂಗಪಲ್ಲಿ ಕಡೆಗೆ ಟೀ ಕುಡಿಯಲು ಅವರೊಂದಿಗೆ ಹೊರಟೆ. ಅಪಘಾತವಾದ ನಂತರ ನಾನು ಮೂರ್ಛೆ ಹೋಗಿದ್ದೆ' ಎಂದಿದ್ದಾನೆ.
ಬೆಂಗಳೂರು ಮೂಲದ ಜೂನಿಯರ್ ಆರ್ಟಿಸ್ಟ್ ಮಾನಸ ನಾರಾಯಣ್ ಸಹೋದರಿ ವೈಷ್ಣವಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಮಾನಸ ಹೈದರಾಬಾದ್ಗೆ ಶೂಟಿಂಗ್ಗಾಗಿ ಬಂದ್ದಿದ್ದಳು. ನನ್ನನ್ನು ತಾಯಿಯಂತೆ ನೋಡಿಕೊಳ್ಳುತ್ತಿದ್ದಳು ಎಂದು ಅಳಲು ತೋಡಿಕೊಂಡಿದ್ದಾಳೆ.
ಇದನ್ನೂ ಓದಿ: ಡ್ರಾಪ್ ನೆಪದಲ್ಲಿ ಬಾಲಕಿಯನ್ನ ಕರೆದೊಯ್ದು ಸಾಮೂಹಿಕ ಅತ್ಯಾಚಾರ.. ಪರಿಚಯಸ್ಥನಿಂದಲೇ ನಡೀತು ದುಷ್ಕೃತ್ಯ