ಮುಂಬೈ (ಮಹಾರಾಷ್ಟ್ರ): 5 ಜಿ ನೆಟ್ವರ್ಕ್ಗೆ ಅನುಮತಿ ನೀಡದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಜೂಹಿ ಚಾವ್ಲಾ ಅಲ್ಲಿ ಹಿನ್ನಡೆ ಅನುಭವಿಸಿದ್ದರು. ನಟಿ, ಪರಿಸರ ಪ್ರೇಮಿ ಚಾವ್ಲಾ ಅರ್ಜಿಯನ್ನ ವಜಾ ಮಾಡಿದ್ದ ಕೋರ್ಟ್ ಬರೋಬ್ಬರಿ 20 ಲಕ್ಷ ರೂ. ದಂಡ ವಿಧಿಸಿತ್ತು.
ಈ ಬೆಳವಣಿಗೆಗಳ ಬಳಿಕ ನಟಿ ಜೂಹಿ ಚಾವ್ಲಾ, ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿ, 5- ಜಿ ವಿರುದ್ಧ ಅರ್ಜಿ ಏಕೆ ಸಲ್ಲಿಸಿದ್ದೆ ಎಂಬ ಬಗ್ಗೆ ವಿವರಿಸಿದ್ದಾರೆ. ಈ ವಿಷಯ ಬಹಳಷ್ಟು ಸದ್ದು ಮಾಡುತ್ತಿದೆ. ವಾಸ್ತವವಾಗಿ ನಾನು ನನ್ನ ಅಂತರಾತ್ಮದ ಮಾತನ್ನು ಕೇಳಲು ಸಾಧ್ಯವಾಗಲಿಲ್ಲ. ಈಗ ಮಾಡುತ್ತಿರುವ ಸದ್ದಿನಲ್ಲಿ ಮಹತ್ವದವಾದ ಸಂದೇಶವನ್ನು ನಾವೆಲ್ಲ ಮರೆತು ಬಿಟ್ಟಿದ್ದೇವೆ ಇಲ್ಲವೇ ಮರೆತು ಹೋಗಿದ್ದೇವೆ ಎಂದಿದ್ದಾರೆ.
ಅಂದ ಹಾಗೆ ನಾನು 5-ಜಿ ವಿರುದ್ಧವಾಗಿಲ್ಲ. ನಾನು ಅದನ್ನು ಸ್ವಾಗತಿಸುತ್ತೇನೆ. ನನ್ನ ಕಾಳಜಿ ಎಂದರೆ, ಸಂಬಂಧಪಟ್ಟ ಆಡಳಿತದಿಂದ ಜನರಿಗೆ 5 ಜಿ ಒಳ್ಳೆಯದ್ದಾ ಎಂಬುದನ್ನು ದೃಢಪಡಿಸಬೇಕೆಂಬುದಷ್ಟೇ ನನ್ನ ಕಾಳಜಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಮುಂದುವರಿದು ಮಾತನಾಡಿರುವ ಅವರು, ಸರ್ಕಾರ ಈ ಸಂಬಂಧ ವರದಿಯನ್ನ ಸಾರ್ವಜನಿಕವಾಗಿ ಬಹಿರಂಗ ಪಡಿಸಿ, 5-Gಯಿಂದ ಯಾವುದೇ ಭಯ ಇಲ್ಲ ಎಂಬುದನ್ನು ಖಚಿತಪಡಿಸಬೇಕಾದ ಅಗತ್ಯ ಇದೆ ಎಂದು ನಟಿ ಜೂಹಿ ಚಾವ್ಲಾ ಇನ್ಸ್ಟಾಗ್ರಾಮಾದ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ವಿಡಿಯೊದಲ್ಲಿ ಜುಹಿ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "5 ಜಿ ಮಕ್ಕಳಿಗೆ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂದು ನಾವು ತಿಳಿದುಕೊಳ್ಳಬೇಕು ... ಇದು ಗರ್ಭಿಣಿಯರಿಗೆ ನಮ್ಮ ಸಸ್ಯ ಮತ್ತು ಪ್ರಾಣಿಗಳಿಗೆ, ಹುಟ್ಟಲಿರುವ ಮಕ್ಕಳಿಗೆ, ವಯಸ್ಸಾದ ಜನರಿಗೆ ಸುರಕ್ಷಿತವಾಗಿದೆ ಎಂದು ತಿಳಿಯಲು ನಾವು ಬಯಸುತ್ತೇವೆ ಎಂದು ಜೂಹಿ ಚಾವ್ಲಾ ವಿಡಿಯೋದಲ್ಲಿ ತಮ್ಮ ಕಾಳಜಿ ಹಿಂದಿನ ಮರ್ಮವನ್ನ ಜನರ ಮುಂದಿಟ್ಟಿದ್ದಾರೆ.
ವಿಡಿಯೋ ಅಪ್ಲೋಡ್: ಗರಂ ಆದ ಕೋರ್ಟ್
ಚಾವ್ಲಾ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಪಡೆಯಲು ವಿಚಾರಣೆಯ ಲಿಂಕ್ ಅನ್ನು ಪ್ರಸಾರ ಮಾಡಿದ್ದಾರೆ. ಪ್ರಚಾರಕ್ಕಾಗಿ ಮೊಕದ್ದಮೆ ಹೂಡಲಾಗಿದೆ ಎಂದು ತೋರುತ್ತದೆ. ಫಿರ್ಯಾದುದಾರ ಜುಹಿ ಚಾವ್ಲಾ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಚಾರಣೆಯ ಲಿಂಕ್ ಅನ್ನು ಮೂರು ಬಾರಿ ಹಾಕಿದ್ದಾರೆ. ದೆಹಲಿ ಪೊಲೀಸರು ಈ ಸಂಬಂಧದ ವ್ಯಕ್ತಿಗಳನ್ನು ಗುರುತಿಸಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಆದೇಶಿಸಿದೆ.