ನವದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತೀರ್ಪುಗಳನ್ನು ನೀಡುವಾಗ ನ್ಯಾಯಾಧೀಶರು/ ನ್ಯಾಯಮೂರ್ತಿಗಳು ವಿಷಯವನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಹೇಳಿದ್ದಾರೆ.
"ಹಿಂದಿನಿಂದಲೂ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳು ಪ್ರಸ್ತುತತೆಯನ್ನು ಅರ್ಥೈಸಿಕೊಳ್ಳಬೇಕು. ಎಲ್ಲಾ ವಕೀಲರು ಲಿಂಗ ಸಂವೇದನೆಗೆ ಸಂಬಂಧಿಸಿದಂತೆ ಎರಡು ಮೂರು ವರ್ಷಗಳ ತರಬೇತಿಯನ್ನು ಪಡೆಯಬೇಕಿದೆ. ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ನೀಡಬೇಕು. ನ್ಯಾಯಾಧೀಶರು ಸೂಕ್ಷ್ಮತೆಯಿಂದ ತೀರ್ಪು ನೀಡಬೇಕಿದೆ" ಎಂದು ಅವರು ಸಲಹೆ ರೂಪದ ಮನವಿ ಮಾಡಿದ್ದಾರೆ.
ಕಾನೂನು ಶಿಕ್ಷಣ ನೀಡುವ ಕಾಲೇಜುಗಳಲ್ಲಿ ಲಿಂಗ ಸಂವೇದನೆ ಕುರಿತು ಯಾವುದೇ ಕೋರ್ಸ್ ಇಲ್ಲ. ಕೆಲವು ಕಾನೂನು ಕಾಲೇಜುಗಳು ಇನ್ನು ಆಯ್ಕೆಯಂತೆ ಪರಿಗಣಿಸುತ್ತಿದೆ. ಇನ್ನು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠವು ಮಧ್ಯಪ್ರದೇಶ ಹೈಕೋರ್ಟ್ ಹೊರಡಿಸಿದ ಆದೇಶದ ವಿರುದ್ಧ ಒಂಬತ್ತು ಮಹಿಳಾ ವಕೀಲರು ಸಲ್ಲಿಸಿದ್ದ ಮನವಿಯನ್ನು ಆಲಿಸುವ ವೇಳೆ ಅಟಾರ್ಜಿ ಜನರಲ್ ಈ ಸಲಹೆ ನೀಡಿದ್ದಾರೆ.
ಇನ್ನು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಸಹಾನುಭೂತಿಯಿಂದ ನಡೆಸುವ ಸಲುವಾಗಿ ಹೆಚ್ಚಿನ ಮಹಿಳಾ ನ್ಯಾಯಾಧೀಶರು ಅಗತ್ಯವಿದ್ದಾರೆ ಎಂದು ಮಹಿಳಾ ವಕೀಲರು ಲಿಖಿತ ಟಿಪ್ಪಣಿ ಮೂಲಕ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕೆ.ಕೆ.ವೇಣುಗೋಪಾಲ್ ಈ ಪ್ರತಿಕ್ರಿಯೆ ನೀಡಿದ್ದಾರೆ.