ನವದೆಹಲಿ : ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗುತ್ತಿವೆ. ಭಾರತ ಈ ಯುದ್ಧದ ವಿಚಾರದಲ್ಲಿ ತಟಸ್ಥ ನೀತಿ ಅನುಸರಿಸುತ್ತಿದೆ. ಈ ತಟಸ್ಥ ನೀತಿ ಪ್ರತ್ಯಕ್ಷವಾಗಿಯೇ ರಷ್ಯಾದ ಪರವಾಗಿದೆ.
ಆದರೆ, ಈಗ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ನ್ಯಾಯಾಧೀಶರೊಬ್ಬರು ರಷ್ಯಾದ ವಿರುದ್ಧವಾಗಿ ಮತ ಚಲಾಯಿಸಿದ್ದು, ಭಾರತ ಸ್ವಲ್ಪಮಟ್ಟಿಗೆ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ರಷ್ಯಾ ದೇಶವು ಉಕ್ರೇನ್‌ನಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮತದಾನ ನಡೆಸಲಾಗಿತ್ತು. ಒಟ್ಟು 15 ನ್ಯಾಯಾಧೀಶರಲ್ಲಿ 13 ಮಂದಿ ರಷ್ಯಾದ ವಿರುದ್ಧವಾಗಿ ಮತ ಚಲಾಯಿಸಿದರೆ, ಎರಡು ರಾಷ್ಟ್ರಗಳ ನ್ಯಾಯಾಧೀಶರು ರಷ್ಯಾ ಪರವಾಗಿ ಮತ ಚಲಾವಣೆ ಮಾಡಿದ್ದರು.
ರಷ್ಯಾ ವಿರುದ್ಧದ ಮತಚಲಾವಣೆ ಮಾಡಿದವರಲ್ಲಿ ಭಾರತದ ದಲ್ವೀರ್ ಭಂಡಾರಿ ಕೂಡ ಸೇರಿದ್ದಾರೆ. ರಷ್ಯಾ ವಿರುದ್ಧ ಬಹುಮತ ಸಿಕ್ಕ ಹಿನ್ನೆಲೆಯಲ್ಲಿ ರಷ್ಯಾ ಕೂಡಲೇ ಉಕ್ರೇನ್‌ನಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಬೇಕೆಂದು ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಿದೆ.
ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆಯ ವಕ್ತಾರರಾದ ಅರಿಂದಮ್ ಬಾಗ್ಚಿ, ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗುವವರು ಸ್ವಂತ ಸಾಮರ್ಥ್ಯದ ಮೇಲೆ ನ್ಯಾಯಾಧೀಶರಾಗಿರುತ್ತಾರೆ. ಅವರು ದೇಶವನ್ನು ಪ್ರತಿನಿಧಿಸುವುದಿಲ್ಲ. ಅವರು ಯಾವ ರೀತಿ ಮತದಾನ ಮಾಡುತ್ತಾರೆ ಎಂಬುದನ್ನು ಸರ್ಕಾರ ನಿರ್ಧರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿ ರಷ್ಯಾ ದಾಳಿಗೆ ಅಮೆರಿಕ ಪ್ರಜೆ ಬಲಿ: ವರದಿ