ಗೊಡ್ಡಾ(ಬಿಹಾರ): ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್‌ಗೆ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶ ಶಿವಪಾಲ್ ಸಿಂಗ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇನ್ನಾರು ತಿಂಗಳಲ್ಲಿ ಅವರು ಸೇವೆಯಿಂದ ನಿವೃತ್ತರಾಗಲಿದ್ದು, ಅದಕ್ಕೂ ಮೊದಲು ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರು ಬಿಜೆಪಿ ನಾಯಕಿ, ವಕೀಲೆಯಾದ ನೂತನ್ ತಿವಾರಿ ಅವರನ್ನು ವರಿಸಿದ್ದಾರೆ. ಮದುವೆಯಾಗುವುದರಲ್ಲಿ ಏನು ವಿಶೇಷ ಅಂತೀರಾ. ಶಿವಪಾಲ್ ಸಿಂಗ್ ಅವರಿಗೆ ಇದೀಗ 64 ವರ್ಷ. ಇನ್ನಾರು ತಿಂಗಳಲ್ಲಿ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಈ ಪ್ರಾಯದಲ್ಲಿ ಅವರು ವಿವಾಹವಾಗಿದ್ದು, ಎಲ್ಲರ ಹುಬ್ಬೇರಿಸಿದೆ.
ಬಿಹಾರದ ಗೊಡ್ಡಾ ಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಸೇವೆಯಲ್ಲಿರುವ ಶಿವಪಾಲ್ ಸಿಂಗ್ ಅವರು, ಅದೇ ಕೋರ್ಟ್‌ನಲ್ಲಿ ವಕೀಲರಾಗಿರುವ ನೂತನ್ ತಿವಾರಿ ಅವರನ್ನು ಪ್ರೇಮ ವಿವಾಹವಾಗಿದ್ದಾರೆ. ನೂತನ್ ತಿವಾರಿ ಅವರು ಮುನ್ಸಿಪಲ್ ಕೌನ್ಸಿಲ್‌ನ ಉಪಾಧ್ಯಕ್ಷರಾಗಿದ್ದರಲ್ಲದೇ, ಬಿಜೆಪಿ ರಾಜ್ಯ ಘಟಕದಲ್ಲಿಯೂ ಕೆಲಸ ಮಾಡಿದ್ದಾರೆ.
50 ವರ್ಷದ ನೂತನ್ ತಿವಾರಿ ಅವರಿಗೂ ಇದು ಎರಡನೇ ವಿವಾಹವಾಗಿದೆ. ಪತಿಯನ್ನು ಕಳೆದುಕೊಂಡಿರುವ ಅವರಿಗೆ ಓರ್ವ ಪುತ್ರನಿದ್ದಾನೆ. ನ್ಯಾ.ಶಿವಪಾಲ್ ಸಿಂಗ್ ಅವರಿಗೂ ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ. ಇಬ್ಬರ ವಿವಾಹಕ್ಕೆ ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿವೆ. ದುಮ್ಕಾ ಕೋರ್ಟ್‌ನಲ್ಲಿ ವಿವಾಹ ನೋಂದಣಿ ಮಾಡಿಸಲಾಗಿದೆ.
ಓದಿ: ಪಾಲಿಟ್ರೌಮಾದಿಂದ ಸೈರಸ್ ಮಿಸ್ತ್ರಿ ಸಾವು: ಮರಣೋತ್ತರ ಪರೀಕ್ಷಾ ವರದಿ