ಜೋಶಿಮಠ(ಉತ್ತರಾಖಂಡ): ಜೋಶಿಮಠದಲ್ಲಿ ಭೂ ಕುಸಿತದ ಪರಿಣಾಮ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಪ್ರಸ್ತುತ ಭೂಕುಸಿತದಿಂದ ಹಲವಾರು ಮನೆಗಳು ಬಿರುಕು ಬಿಟ್ಟಿದ್ದು, ಜನರನ್ನು ಮತ್ತಷ್ಟು ಸಂಕಷ್ಟದ ಜೀವನಕ್ಕೆ ನೂಕಿದೆ. ಎಲ್ಲ ಸಾಮಾಜಿಕ ಹಾಗೂ ಕೌಟುಂಬಿಕ ಕಾರ್ಯಗಳು ಸ್ಥಗಿತಗೊಂಡಿದ್ದರಿಂದ ಪ್ರಸ್ತುತ ಕುಟುಂಬ ಜೀವನ ಹಳಿ ತಪ್ಪಿದಂತಾಗಿದೆ. ಮುಳುಗುತ್ತಿರುವ ಗಿರಿಧಾಮ ಜೋಶಿಮಠದಲ್ಲಿ ಮುಂದೆ ನಡೆಯಬೇಕಿದ್ದ ಹಲವಾರು ಮದುವೆಗಳಿಗೂ ಸರ್ಕಾರ ತಡೆ ನೀಡಿದೆ.
ದಿನದಿಂದ ದಿನ ಕಳೆದಂತೆ ನಿವಾಸಿಗಳಲ್ಲಿ ಆತಂಕ ತೀವ್ರತೆ ಹೆಚ್ಚಾಗಿದೆ. ಮಕ್ಕಳ ಮದುವೆಗಾಗಿ ಖರೀದಿಸಿದ್ದ ವಸ್ತುಗಳನ್ನೂ ಎಲ್ಲಿ ಇಡಬೇಕು? ಖರೀದಿ ವಸ್ತುಗಳಿಗೆ ಏನಾಗಲಿದೆಯೋ? ಈಗಾಗಲೇ ಸರ್ಕಾರವೂ ಸಂತ್ರಸ್ತರಿಗೆ ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದೆ. ಇಂಥ ಪರಿಸ್ಥಿತಿಯಲ್ಲಿ ಮನೆಯ ವಧು ವರರಿಗೆ ಖರೀದಿಸಿದ ಸಾಮಗ್ರಿ, ಊಡುಗೊರೆ, ಮತ್ತಿತರ ಮನೆಗೆ ಬೇಕಾಗಿದ್ದ ವಸ್ತುಗಳನ್ನು ಸುರಕ್ಷಿತವಾಗಿಡಲೂ ಮನೆ ಸಿಗದೇ ಪರಿತಪಿಸುವಂತಾಗಿದೆ.
ಮದುವೆ ಮಾಡಬೇಕೋ.. ಮುಂದೂಡಬೇಕೋ - ಗೊಂದಲ: ಮದುವೆ ಸ್ಥಗಿತಗೊಳಿಸಬೇಕೋ ಅಥವಾ ಮುಂದೂಡಬೇಕು ಎಂಬುವುದೇ ಜೋಶಿಮಠದ ಸಂತ್ರಸ್ತ ಕುಟುಂಬಗಳಿಗೆ ಚಿಂತೆಗೆ ಕಾಡುತ್ತಿದೆ. ಸಂತ್ರಸ್ತೆ ಜ್ಯೋತಿ ಎಂಬ ಯುವತಿ ಕಣ್ಣೀರು ಇಡುತ್ತ ಮಾತನಾಡಿ, ನಮ್ಮ ಕುಟುಂಬದ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಇಂಥ ಪರಿಸ್ಥಿತಿಯಲ್ಲಿ ನನ್ನ ಮದುವೆ ಮಾಡುವುದು ಅಸಾಧ್ಯವಾಗಿದೆ. ನಾವು ಮುಂದಿನ ಮದುವೆ ಸಮಾರಂಭದ ಖರೀದಿಗಾಗಿ ಡೆಹ್ರಾಡೂನ್‌ಗೆ ಬಂದಿದ್ದೇವೆ. ಆದರೆ, ಮನೆಯ ಪರಿಸ್ಥಿತಿ ಅತ್ಯಂತ ನೀರಸವಾಗಿದೆ. ಖರೀದಿ ವಸ್ತುಗಳನ್ನು ಎಲ್ಲಿಡಬೇಕೋ ಎಂಬ ಚಿಂತೆಯಲ್ಲಿ ತೊಡಗಿದ್ದೇವೆ. ಎಲ್ಲಿಗೆ ಹೋಗಬೇಕು ಮತ್ತು ಹೇಗೆ ನಿರ್ವಹಿಸಬೇಕು ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಹೇಳಿದಳು.
ಜೋಶಿಮಠ ಪ್ರದೇಶದಲ್ಲಿ ಭೂ ಕುಸಿತದಿಂದಾಗಿ ನಮ್ಮ ಮನೆಗಳು ಬಿರುಕು ಬಿಟ್ಟಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಜ್ಯೋತಿ ಅವರ ತಾಯಿ, ನನ್ನ ಮಗಳ ಮದುವೆಯನ್ನು ಮಾರ್ಚ್ ತಿಂಗಳಲ್ಲಿ ನಿಶ್ಚಯಿಸಲಾಗಿತ್ತು. ಆದರೆ, ಅಧಿಕಾರಿಗಳು ನಮ್ಮ ಮನೆಗೆ ರೆಡ್ ಕ್ರಾಸ್ ಗುರುತು ಹಾಕಿ ನಮ್ಮ ಮನೆ ವಾಸಿಸಲು ಯೋಗ್ಯವಾಗಿಲ್ಲ ಎಂದು ತಿಳಿಸಿದೆ.
ಈಗ ಮನೆ ಖಾಲಿ ಮಾಡಿ ಬೇರೆಡೆ ಆಶ್ರಯ ಪಡೆಯಬೇಕೋ, ಮುಂದೇನೂ ಆಗುತ್ತದೋ ಆ ದೇವರೇ ಬಲ್ಲ. ನಮ್ಮ ಮನೆ ಬಿರುಕು ಬಿಟ್ಟ ಪರಿಣಾಮ ಹೊಸ ಮನೆ ಮಾಡುವುದೂ ಮದುವೆ ಕಾಲದಲ್ಲಿ ವಿನಾಕಾರಣ ಹಣ ಖರ್ಚು ಮಾಡಬೇಕಾಗಿದೆ. ಈ ಮನೆಯಿಂದಲೇ ಮಗಳ ಮದುವೆ ಮಾಡಲು ಮುಂದಾಗಿದ್ದೆವು. ಆದರೆ ದುರ್ದೈವ, ಈಗಿನ ಪರಿಸ್ಥಿತಿ ನೋಡಿ ಬೇರೆ ವಿಚಾರ ಮಾಡಬೇಕಾಗಿದೆ ಎಂದು ವ್ಯಥೆ ಪಟ್ಟರು.
ಇದರ ಮಧ್ಯೆ ಚಮೋಲಿ ವಿಪತ್ತು ನಿರ್ವಹಣಾ ಇಲಾಖೆ ಸಲ್ಲಿಸಿರುವ ವರದಿಯಲ್ಲಿ ಜೋಶಿಮಠ ಪುರಸಭೆಯ ಒಂಬತ್ತು ವಾರ್ಡ್‌ಗಳಲ್ಲಿ ಕನಿಷ್ಠ 760 ಕಟ್ಟಡಗಳು ವಾಸಿಸಲು ಅಸುರಕ್ಷಿತ ಎಂದು ಗುರುತಿಸಲಾಗಿದೆ. ಇಲ್ಲಿಯವರೆಗೆ ಕನಿಷ್ಠ 169 ಕುಟುಂಬಗಳು ಅಥವಾ 589 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಪರಿಸರವಾದಿಗಳು ಆತಂಕ: ಜೋಶಿಮಠವೂ ಪ್ರಸ್ತುತ ಭೂಕುಸಿತದಿಂದ ಹದಗೆಟ್ಟಿರುವ ಪರಿಸ್ಥಿತಿ ಬಗ್ಗೆ ಇಲ್ಲಿನ ಪರಿಸರವಾದಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಜೋಶಿಮಠದ ಭೂಕುಸಿತವನ್ನೂ ಮುಳುಗುತ್ತಿರುವ ಮತ್ತು ವಿನಾಶಕಾರಿ ಉತ್ತರಾಖಂಡದ ಕೇದಾರನಾಥ ಪ್ರವಾಹದ ಜತೆಗೆ ಹೋಲಿಕೆ ಮಾಡಿದ ಅವರು, ಜೋಶಿಮಠದಲ್ಲಿ ಪದೇ ಪದೆ ಭೂಕುಸಿತ ಸಂಭವಿಸುವದರ ಹಿಂದೆ ಅವಶೇಷಗಳು, ಮಣ್ಣು ಮತ್ತು ಬಂಡೆಗಳ 'ಮೊರೈನ್'ಗಳ ಸಾಧ್ಯತೆ ಬಗ್ಗೆ ಅವರು ಸುಳಿವು ನೀಡುತ್ತಿದ್ದಾರೆ. ಚಲಿಸುವ ಹಿಮನದಿಗಳಿಂದ ಮೊರೆನ್ ಭೂ ರೂಪಗಳು ಉದ್ಬವಿಸಿವೆ ಎಂದು ತಿಳಿಸಿದ್ದಾರೆ.
ಸದ್ಯ ಜೋಶಿಮಠದಲ್ಲಿ ಭೂ ಕುಸಿತದ ಹಿನ್ನೆಲೆ ಮುಂದಿನ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಜೋಶಿಮಠದ ಪರಿಸ್ಥಿತಿಯನ್ನು ಕೇದಾರನಾಥ ಪ್ರವಾಹ ಜತೆಗೆ ಹೋಲಿಸಿದ ಉತ್ತರಾಖಂಡದ ಪರಿಸರವಾದಿ ಜೆಪಿ ಮೈಥಾನಿ, ಈ ಎರಡೂ ಆಕಸ್ಮಿಕ ಘಟನೆಗಳೂ ಪರಸ್ಪರ ಪ್ರತ್ಯೇಕವಲ್ಲ. ಕೇದಾರನಾಥ ಹಠಾತ್ ಪ್ರವಾಹ ಎಚ್ಚರಿಕೆಯ ಗಂಟೆಯಾಗಿದೆ. ಆದರೆ, ನಾವು ಅದನ್ನು ನಿರ್ಲಕ್ಷಿಸಿದ್ದೇವೆ ಎಂದು ಹೇಳಿದ್ದಾರೆ. ದೊಡ್ಡ ಕಾಮಗಾರಿ ನಿರ್ಮಾಣ ಕಾರ್ಯದಿಂದ ಪರ್ವತ ಪ್ರದೇಶಗಳಿಗೆ ಹೊರೆಯಾಗುವುದರ ಪರಿಣಾಮ ಜೋಶಿಮಠದ ಸಮಸ್ಯೆ ಉದ್ಭವಿಸಿದೆ. ಜೋಶಿಮಠದಲ್ಲಿ ಭೂಕುಸಿತದ ದೀರ್ಘಕಾಲದ ಸಮಸ್ಯೆಯ ಬಗ್ಗೆ ಪರಿಸರವಾದಿ ಕಳವಳ ವ್ಯಕ್ತಪಡಿಸಿದ್ದಾರೆ.
ಜೋಶಿಮಠದಲ್ಲಿ ನಿರಂತರ ಭೂಮಿ ಕುಸಿತದ ಪರಿಸ್ಥಿತಿಯ ಕುರಿತು ಮಿಶ್ರಾ ಸಮಿತಿಯ ವರದಿಯನ್ನು ಉಲ್ಲೇಖಿಸಿರುವ ಪರಿಸರವಾದಿಗಳು, 2013 ರ ಹಠಾತ್ ಪ್ರವಾಹದ ನಂತರ ಕೇದಾರನಾಥದ ಪುನರ್ನಿರ್ಮಾಣದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಮಿಶ್ರಾ ಸಮಿತಿ ವರದಿಯು ಜೋಶಿಮಠ ಮುಳುಗುತ್ತಿರುವ ಪ್ರದೇಶ ಬಗ್ಗೆ ಎಲ್ಲ ದಾಖಲೆಗಳು ಮತ್ತು ಮಾತುಕತೆಗಳನ್ನು ಪರಿಗಣನೆಗೆ ತೆಗೆದುಕೊಂಡಿರುವ ವರದಿಯು ಇಂದಿನ ಭೂ ಕುಸಿತದ ಸಮಸ್ಯೆ ಹಿಂದಿರುವ ಮೊರೆನ್ ಸಿದ್ಧಾಂತವನ್ನು ಮತ್ತಷ್ಟು ಸಮರ್ಥಿಸುತ್ತದೆ.
ಜೋಶಿಮಠವು ಸಾವಿರಾರೂ ವರ್ಷಗಳ ಭೂಕುಸಿತದ ಅವಶೇಷಗಳ ಮೇಲೆ ನೆಲೆಸಿದೆ.ಇದು ಭೂಮಿ ಮುಳುಗಲು ಪ್ರಮುಖ ಕಾರಣ ಎಂದು ಹಲವಾರು ತಜ್ಞರು ನಂಬಿದ್ದಾರೆ. ಜೋಶಿಮಠದ ಸಹಿತ ಉತ್ತರಕಾಶಿ, ತೆಹ್ರಿ, ಪೌರಿ ಮತ್ತು ಕರಣ್‌ಪ್ರಯಾಗ ಸೇರಿದಂತೆ ಉತ್ತರಾಖಂಡದ ಇತರ ಪ್ರದೇಶಗಳಲ್ಲೂ ಭೂಮಿ ಕುಸಿತದ ವಿದ್ಯಮಾನಗಳು ವರದಿಯಾಗುತ್ತಿವೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ.
ಇದನ್ನೂಓದಿ:ಜೋಶಿಮಠದಲ್ಲಿ ಶಿಥಿಲ ಕಟ್ಟಡ ನೆಲಸಮ ಶುರು:1000 ವರ್ಷಗಳ ಹಿಂದೆಯೂ ಭೂ ಕುಸಿತದ ದುರಂತ ಸಂಭವಿಸಿದ್ದವು