ಶ್ರೀನಗರ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಭಾನುವಾರ ಮೂರು ದಿನಗಳ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಶ್ರೀನಗರ ನಗರದಲ್ಲಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಗುಪ್ಕರ್ ರಸ್ತೆಯಿಂದ ಸಂಚಾರಕ್ಕೆ ನಿಷೇಧ ಹೇರಲಾಗುವುದು ಎಂದು ನಿನ್ನೆ ಜಮ್ಮು ಮತ್ತು ಕಾಶ್ಮೀರ ಸಂಚಾರ ಪೊಲೀಸರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಇಂದು, ಯಾವುದೇ ವಾಹನವನ್ನು ಗುಪ್ಕರ್ ರಸ್ತೆಯಲ್ಲಿ ಸಾಗಲು ಅನುಮತಿಸಿಲ್ಲ.
ಮೂಲಗಳ ಪ್ರಕಾರ, ರಾಷ್ಟ್ರಪತಿ ಕೋವಿಂದ್ ಅವರು ನಾಳೆ ಶ್ರೀನಗರಕ್ಕೆ ಆಗಮಿಸಲಿದ್ದು, ದಾಲ್ ಸರೋವರದ ದಂಡೆಯಲ್ಲಿರುವ ಶೇರ್-ಎ-ಕಾಶ್ಮೀರ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ (ಎಸ್‌ಕೆಐಸಿಸಿ) ಕಾಶ್ಮೀರ ವಿಶ್ವವಿದ್ಯಾಲಯದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕಾರ್ಗಿಲ್ ವಿಜಯ್ ದಿವಸ್ 22 ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಪಾಲ್ಗೊಳ್ಳಲು ಸೋಮವಾರ ಅವರು ಲಡಾಖ್‌ಗೆ ತೆರಳಲಿದ್ದಾರೆ.
ವಿಶೇಷವೆಂದರೆ, 2019 ರಲ್ಲಿ ರಾಷ್ಟ್ರಪತಿಗಳು ಈ ಕಾರ್ಯಕ್ರಮಕ್ಕೆ ಹಾಜರಾಗಲು ನಿರ್ಧರಿಸಿದ್ದರು. ಆದರೆ, ಶ್ರೀನಗರ ವಿಮಾನ ನಿಲ್ದಾಣದಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಅವರಿಗೆ ಸಾಧ್ಯವಾಗಿರಲಿಲ್ಲ. ಇದಕ್ಕೂ ಮುನ್ನ 2017 ರಲ್ಲಿ ಅವರು ಲಡಾಖ್‌ಗೆ ಭೇಟಿ ನೀಡಿ ಮಿಲಿಟರಿ ಸಿಬ್ಬಂದಿಯನ್ನು ಭೇಟಿಯಾಗಿದ್ದರು.