ಬಾರಾಮುಲ್ಲಾ (ಜಮ್ಮು ಮತ್ತು ಕಾಶ್ಮೀರ) : ಇಲ್ಲಿನ ಗಡಿ ನಿಯಂತ್ರಣ ರೇಖೆಯ ಮೂಲಕ ಭಾರತವನ್ನು ಪ್ರವೇಶಿಸಲು ಯತ್ನಿಸಿದ ಮೂವರು ನುಸುಳುಕೋರರನ್ನು ಭಾರತೀಯ ಸೇನೆ ಶನಿವಾರ ಹೊಡೆದುರುಳಿಸಿತ್ತು. ಬಾರಾಮುಲ್ಲಾ ಜಿಲ್ಲೆಯ ಉರಿ ಪಟ್ಟಣದ ಗಡಿ ನಿಯಂತ್ರಣ ರೇಖೆಯಲ್ಲಿ ಮೂವರು ನುಸುಳುಕೋರಲು ಭಾರತದ ಗಡಿ ದಾಟಲು ಯತ್ನಿಸುತ್ತಿದ್ದರು. ಈ ವೇಳೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದ್ದು, ಮೂವರೂ ಹತರಾಗಿದ್ದರು. ಈ ವೇಳೆ ಇಬ್ಬರ ಶವವನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನೋರ್ವನ ಶವವನ್ನು ವಶಕ್ಕೆ ಪಡೆಯುವಾಗ ಪಾಕಿಸ್ತಾನದ ಪಡೆಗಳು ದಾಳಿ ನಡೆಸಿವೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂ ಪ್ರತ್ಯುತ್ತರ ನೀಡಿದೆ. ಇದರಿಂದಾಗಿ ಎರಡು ಕಡೆಯಿಂದ ಗುಂಡಿನ ಚಕಮಕಿ ಉಂಟಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಭಾರತೀಯ ಸೇನೆಯ ಪಿರ್ ಪಂಜಲ್ ಬ್ರಿಗೇಡ್ನ ಕಮಾಂಡರ್ ಬ್ರಿಗೇಡಿಯರ್ ಪಿಎಂಎಸ್ ಧಿಲ್ಲಾನ್, ನುಸುಳುಕೋರರ ಬಗ್ಗೆ ಲಭಿಸಿದ ನಿಖರ ಮಾಹಿತಿಯನ್ನು ಆಧರಿಸಿ, ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮೂವರು ನುಸುಳುಕೋರರನ್ನು ಸದೆಬಡಿದಿದೆ. ಇಬ್ಬರು ಉಗ್ರರ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಇನ್ನೋರ್ವನ ಮೃತದೇಹ ಪಾಕಿಸ್ತಾನದ ಗಡಿಭಾಗದಲ್ಲಿದ್ದು, ಈ ವೇಳೆ ಪಾಕಿಸ್ತಾನ ಸೇನೆ ದಾಳಿ ನಡೆಸಿದ್ದರಿಂದ ಮೃತದೇಹವನ್ನು ಪತ್ತೆ ಹಚ್ಚಲು ಕಷ್ಟವಾಗಿದೆ ಎಂದು ತಿಳಿಸಿದರು. ಜಂಟಿ ಕಾರ್ಯಾಚರಣೆಯಿಂದಾಗಿ ನುಸುಳುಕೋರರ ಬಳಿಯಿದ್ದ ಅಪಾರ ಪ್ರಮಾಣ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳು ಹಾಗೂ ಎರಡು ದೇಶಗಳ ಕರೆನ್ಸಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಶನಿವಾರ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ಸುಮಾರು 2 ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಯಿತು. ಬೆಳಗ್ಗೆ 6.40ಕ್ಕೆ ಪ್ರಾರಂಭವಾದ ಗುಂಡಿನ ದಾಳಿ 8.40 ಸುಮಾರಿಗೆ ಮುಕ್ತಾಯಗೊಂಡಿತು. ಈ ವೇಳೆ ಭಾರತೀಯ ಸೇನೆ ಯುಬಿಜಿಎಲ್ಎಸ್ ಮತ್ತು ಎಂಜಿಎಲ್ಎಸ್ ಶಸ್ತ್ರಾಸ್ತ್ರ ಮತ್ತು ರಾಕೆಟ್ ಲಾಂಚರ್ಗಳನ್ನು ಬಳಸಿ ದಾಳಿ ನಡೆಸಿತು. ಬಳಿಕ ಮತ್ತೆ ನುಸುಳುಕೋರರು ಚಲನವಲನ ಕಂಡುಬಂದ ಹಿನ್ನೆಲೆ 9.25ರ ಸುಮಾರಿಗೆ ಎರಡನೇ ಸುತ್ತಿನ ಗುಂಡಿನ ಚಕಮಕಿ ನಡೆಯಿತು. ಸುಮಾರು ಅರ್ಧ ಗಂಟೆ ಕಾಲ ನಡೆದ ಗುಂಡಿನ ದಾಳಿಯಲ್ಲಿ ಇನ್ನೋರ್ವ ನುಸುಳುಕೋರರನ್ನು ಗುಂಡಿಕ್ಕಿ ಬೇಟೆಯಾಡಲಾಗಿದೆ. ಇದಕ್ಕೂ ಮುನ್ನ ಗಾಯಗೊಂಡಿದ್ದ ನುಸುಳುಕೋರ ಪಾಕಿಸ್ತಾನ ಸೇನೆಯ ನೆರವಿಗಾಗಿ ಅಂಗಲಾಚಿದ್ದ ಎಂದು ಪಿರ್ ಪಂಜಲ್ ಬ್ರಿಗೇಡ್ನ ಕಮಾಂಡರ್ ಬ್ರಿಗೇಡಿಯರ್ ಪಿಎಂಎಸ್ ಧಿಲ್ಲಾನ್ ಮಾಹತಿ ನೀಡಿದರು.
ಇದನ್ನೂ ಓದಿ : ಜಮ್ಮು ಮತ್ತು ಕಾಶ್ಮೀರ: ಗಡಿ ನಿಯಂತ್ರಣ ರೇಖೆ ದಾಟುತ್ತಿದ್ದ ಶಂಕಿತ ಮಹಿಳೆಯನ್ನು ಗುಂಡಿಕ್ಕಿ ಕೊಂದ ಭದ್ರತಾ ಪಡೆ