ನೌಶೇರಾ(ಜಮ್ಮು ಕಾಶ್ಮೀರ): ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಆದ ನಿಗೂಢ ಸ್ಫೋಟದಲ್ಲಿ ಭದ್ರತಾ ಪಡೆಯ ಇಬ್ಬರು ಹುತಾತ್ಮರಾಗಿದ್ದಾರೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಓರ್ವ ಯೋಧನಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ನಲ್ಲಿ ಘಟನೆ ಸಂಭವಿಸಿದ್ದು, ಲೆಫ್ಟಿನೆಂಟ್ ರಿಶಿ ಕುಮಾರ್ ಮತ್ತು ಸಿಪಾಯಿ ಮಂಜಿತ್ ಹುತಾತ್ಮರಾಗಿದ್ದಾರೆ. ನೌಶೇರಾದ ಲಾಮ್ ಸೆಕ್ಟರ್ನಲ್ಲಿ ಗಸ್ತು ತಿರುಗುತ್ತಿರಬೇಕಾದರೆ ಸ್ಫೋಟ ಸಂಭವಿಸಿದೆ.
ಅಕ್ಟೋಬರ್ 30ರಂದು ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದು, ಓರ್ವನಿಗೆ ಗಾಯವಾಗಿದೆ. ಹುತಾತ್ಮರಾದ ಲೆ. ರಿಶಿ ಕುಮಾರ್ ಮತ್ತು ಸಿಪಾಯಿ ಮಂಜಿತ್ ಧೈರ್ಯಶಾಲಿಗಳಾಗಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದರು.
ಲೆ.ರಿಶಿ ಕುಮಾರ್ ಬಿಹಾರದ ಬೆಗುಸರಾಯ್ ನಿವಾಸಿಯಾಗಿದ್ದು, ಸಿಪಾಯಿ ಮಂಜಿತ್ ಸಿಂಗ್ ಪಂಜಾಬ್ನ ಭಟಿಂಡಾ ಬಳಿಯ ಸಿರ್ವೆವಾಲಾ ನಿವಾಸಿಯಾಗಿದ್ದಾರೆ. ಈ ಘಟನೆ ಸಂಭವಿಸಿದ ಸ್ಥಳವನ್ನು ಸುತ್ತುವರಿಯಲಾಗಿದೆ ಎಂದು ಸೇನೆ ಹೇಳಿದೆ.
ಇದಕ್ಕೂ ಮುನ್ನ ಅಕ್ಟೋಬರ್ 11ರಂದು ರಜೌರಿಯ ಡಿಕೆಜಿ ಪ್ರದೇಶದಲ್ಲಿ ಭಯೋತ್ಪಾದನಾ ಕಾರ್ಯಾಚರಣೆಯಲ್ಲಿ ಜೂನಿಯರ್ ಕಮೀಷನ್ಡ್ ಆಫೀಸರ್ (ಜೆಸಿಒ) ಸೇರಿದಂತೆ ಐವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು.
ಇದನ್ನೂ ಓದಿ:'ಕಂಬನಿದುಂಬಿ ಹೋದೆಯಾ ದೂರ..' ಯುವರತ್ನನಿಗೆ ಯಕ್ಷಗಾಯನ ನಮನ