ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಎರಡು ತಿಂಗಳಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಈ ವರ್ಷದ ಜೂನ್ 1 ರಿಂದ ಇಲ್ಲಿಯವರೆಗೆ ಒಟ್ಟು 51 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಗತ್ಯತೆಯ ಆಧಾರದ ಮೇಲೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋವಿಡ್-19 ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಕಡಿಮೆಯಾಗಿತ್ತು. ಆದರೆ ಜೂನ್ ಮೊದಲ ವಾರದಿಂದ ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಿದ ನಂತರ ಮತ್ತೆ ಉಗ್ರರು ತಮ್ಮ ಚಾಳಿ ಮುಂದುವರೆಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಇನ್ನು 52 ದಿನಗಳಲ್ಲಿ ಅಂದರೆ ಜೂನ್ 1 ರಿಂದ ಜುಲೈ 22 ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 34 ಭಯೋತ್ಪಾದನಾ ದಾಳಿಗಳು ನಡೆದಿವೆ. ಭದ್ರತಾ ಪಡೆಗಳು ಅಗತ್ಯದ ಆಧಾರದ ಮೇಲೆ ಕಾರ್ಯಾಚರಣೆ ನಡೆಸುತ್ತಿವೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅಗತ್ಯ ಮತ್ತು ತುರ್ತು ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಯಿತು. ಆದರೆ, ಕಾರ್ಯಾಚರಣೆಗಳು ಸ್ಥಗಿತಗೊಂಡಿರಲಿಲ್ಲ ಎಂದರು.
ಈ ವರ್ಷ ನಡೆದ 61 ಭಯೋತ್ಪಾದಕ ಘಟನೆಗಳಲ್ಲಿ ಒಟ್ಟು 127 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 12 ನಾಗರಿಕರು, 19 ಭದ್ರತಾ ಪಡೆ ಸಿಬ್ಬಂದಿ ಮತ್ತು 96 ಮಂದಿ ಉಗ್ರರು ಹತರಾಗಿದ್ದಾರೆ. ಈ ವರ್ಷ ಜುಲೈನಲ್ಲಿ ಹೆಚ್ಚಿನ ಕೊಲೆಗಳು ನಡೆದಿವೆ. ಜುಲೈ 22 ರವರೆಗೆ 24 ಉಗ್ರರು ಹತರಾದರೆ, ಮೂವರು ಭದ್ರತಾ ಪಡೆ ಸಿಬ್ಬಂದಿ ವೀರಮರಣವನ್ನಪ್ಪಿದ್ದಾರೆ. ಜೂನ್‌ನಲ್ಲಿ 6 ನಾಗರಿಕರು, 5 ಭದ್ರತಾ ಪಡೆ ಸಿಬ್ಬಂದಿ ಮತ್ತು 13 ಉಗ್ರರನ್ನು ಹತ್ಯೆ ಮಾಡಲಾಗಿದೆ.