ರಾಂಚಿ(ಜಾರ್ಖಂಡ್): ಪ್ರಭಾವಿ ವ್ಯಕ್ತಿಗಳು ಅಥವಾ ರಾಜಕಾರಣಿಗಳ ಮುಂದೆ ಅಧಿಕಾರಿಗಳು ತಲೆ ಬಾಗುವುದು, ಅವರ ಪರವಾಗಿ ಕೆಲಸ ಮಾಡಿಕೊಡುವುದು ಸಾಮಾನ್ಯ. ಆದರೆ, ಬಡವರು ಸಣ್ಣದೊಂದು ಬಯಕೆ ಈಡೇರಿಸಲು ಅತ್ತು ಗೋಗರೆದರೂ ಮನದಾಳ ಅರ್ಥ ಮಾಡಿಕೊಳ್ಳುವುದಿಲ್ಲ. ಇಂಥದ್ದೇ ಒಂದು ಅಮಾನವೀಯ ಘಟನೆ ಜಾರ್ಖಂಡ್ನ ಛತ್ರದ ಮಂಡಲ್ ಎಂಬ ಪ್ರದೇಶದ ಸಮೀಪ ನಡೆಯಿತು.
ಸಾವನ್ನಪ್ಪಿದ ಮಗುವಿನ ಮುಖವನ್ನು ಜೈಲಿನಲ್ಲಿರುವ ಕೈದಿ ತಂದೆಗೆ ಕೊನೆಯ ಬಾರಿಗೆ ತೋರಿಸಲೆಂದು ಮಹಿಳೆಯೋರ್ವಳು ಜೈಲಿನ ಹೊರಗಡೆ ಸುಮಾರು 7 ಗಂಟೆಗೂ ಹೆಚ್ಚು ಕಾಲ ಕಾದಿದ್ದಾರೆ. ಈ ಸಂದರ್ಭದಲ್ಲಿ ಕಲ್ಲು ಹೃದಯದ ಅಧಿಕಾರಿಗಳು ಕಾನೂನು ಸುವ್ಯವಸ್ಥೆಯ ಗೋಡೆ ನಿರ್ಮಿಸಿ ಅವಕಾಶ ನಿರಾಕರಿಸಿದರು. ಹೀಗಾಗಿ, ಏಳು ಗಂಟೆಗಳ ಕಾಲ ಜೈಲಿನ ಹೊರಗಡೆಯೇ ಕುಳಿತ ಮಹಿಳೆ ಬಳಿಕ ನಿರಾಸೆಯೊಂದಿಗೆ ಮನೆಗೆ ಹಿಂತಿರುಗಿದ್ದಾರೆ.
ಇದನ್ನೂ ಓದಿ: ಸಕಾಲದಲ್ಲಿ ಸಿಗದ ಆರೋಗ್ಯ ಸೇವೆ: ಗರ್ಭಿಣಿ ಹೊತ್ತೊಯ್ಯುತ್ತಿದ್ದಾಗ ಅವಳಿ ಮಕ್ಕಳು ಸಾವು
ಘಟನೆಯ ಮತ್ತಷ್ಟು ವಿವರ: ಜಾರ್ಖಂಡ್ನ ವಶಿಷ್ಠ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಂದಾರ್ಚುವಾನ್ ಗ್ರಾಮದ ನಿವಾಸಿ ಚುಮನ್ ಎಂಬಾತನ ಪತ್ನಿ ಫೂಲ್ ದೇವಿ ಶುಕ್ರವಾರ ರಾತ್ರಿ ಮಗುವಿಗೆ ಜನ್ಮ ನೀಡಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಇವರಿಗೆ ಆರೋಗ್ಯವಂತ ಮಗು ಜನಿಸಿತ್ತು. ತಾಯಿ-ಮಗು ಆರೋಗ್ಯವಾಗಿದ್ದರು. ಹೀಗಾಗಿ, ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ. ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಶಿಶುವಿನ ಆರೋಗ್ಯ ಹದಗೆಟ್ಟಿದೆ. ದೂರದ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದ ಕಾರಣಕ್ಕೆ ಮತ್ತೆ ಆಸ್ಪತ್ರೆಗೆ ತೆರಳಲು ಸರಿಯಾದ ಸಾರಿಗೆ ವ್ಯವಸ್ಥೆ ದೊರೆಯಲಿಲ್ಲ. ಹೀಗಾಗಿ, ತಡರಾತ್ರಿ ಮಗು ಸಾವನ್ನಪ್ಪಿದೆ.
ಆದರೆ ತಂದೆ ಚುಮನ್ ಕಳೆದ ಏಳು ತಿಂಗಳಿಂದ ಜೈಲಿನಲ್ಲಿದ್ದಾರೆ. ಹಾಗಾಗಿ, ಪುತ್ರನ ಮುಖವನ್ನು ಕೊನೆಯ ಬಾರಿ ತಂದೆಗೆ ತೋರಿಸಲೆಂದು ಮಹಿಳೆ ಜೈಲಿನ ಬಳಿಗೆ ತೆರಳಿದ್ದಾರೆ. ಅಧಿಕಾರಿಗಳ ಮುಂದೆ ಅತ್ತು ಗೋಗರೆದು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಜೈಲಾಧಿಕಾರಿಗಳು ಕರುಣೆಯೇ ತೋರಲಿಲ್ಲ. ಸುಮಾರು ಏಳು ಗಂಟೆಗಳ ಕಾಲ ಮೃತದೇಹದೊಂದಿಗೆ ಜೈಲಿನ ಮುಂದೆ ಕಾದು ಕುಳಿತು ರೋದಿಸಿ ಬಳಲಿದ ಆಕೆ ಬಳಿಕ ಅಂತಿಮ ಸಂಸ್ಕಾರ ನಡೆಸಲು ಮರಳಿ ಹೋಗಿದ್ದಾಳೆ.
ಈ ಘಟನೆ ಸುದ್ದಿಯಾಗುತ್ತಿದ್ದಂತೆ ಜೈಲಾಧಿಕಾರಿ ದಿನೇಶ್ ವರ್ಮಾ ಪ್ರತಿಕ್ರಿಯಿಸಿ, "ವಿಭಾಗೀಯ ಕಾರಾಗೃಹ ಅಧೀಕ್ಷಕರಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಜೈಲಿನ ಕಾನೂನು ಅನುಸರಣೆ ಮಾಡುವಂತೆ ಸೂಚನೆ ನೀಡಿದ್ದರು. ಹೀಗಾಗಿ, ಮಹಿಳೆಯ ಭೇಟಿಗೆ ಅವಕಾಶ ನೀಡಲಿಲ್ಲ" ಎಂದರು.